ಜಿಹಾದ್ ಇಲ್ಲದಿರುತ್ತಿದ್ದರೆ ವಿಶ್ವದಲ್ಲಿ ಉಗ್ರವಾದ ಹರಡುತ್ತಿತ್ತು: ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ

0
928

ಮಂಗಳೂರಿನಲ್ಲಿ ಸೀರತ್ ವಿಚಾರಗೋಷ್ಠಿ

ಮಂಗಳೂರು: ಜಿಹಾದ್ ಅನ್ನುವ ಪದವನ್ನು ಇಂದು ತಪ್ಪು ಗ್ರಹಿಕೆ ಮಾಡಲಾಗಿದೆ. ಜಿಹಾದ್ ಇಲ್ಲದಿರುತ್ತಿದ್ದರೆ ವಿಶ್ವದಲ್ಲಿ ಉಗ್ರವಾದ ಹರಡುತ್ತಿತ್ತು ಎಂದು ಕಾನ್ಪುರ ಉತ್ತರ ಪ್ರದೇಶದ ಶ್ರೀ ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ ಅಭಿಪ್ರಾಯಿಸಿದರು.

ಪ್ರವಾದಿ ಮುಹಮ್ಮದ್ (ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ವಿಷಯದಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿರುವ ಸೀರತ್ ಅಭಿಯಾನದ ಭಾಗವಾಗಿ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಸಮಾಜ ಸುಧಾರಣೆ: ಪ್ರವಾದಿ ಮುಹಮ್ಮದ್ (ಸ) ರ ಶಿಕ್ಷಣದ ಬೆಳಕಿನಲ್ಲಿ’ ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರವಾದಿ ಮುಹಮ್ಮದ್ (ಸ) ರವರು ದೇವರಿಂದ ಬಂದಂತಹ ಆದೇಶವನ್ನು ಮೊದಲು ತಮ್ಮ ಜೀವನದಲ್ಲಿ ಅಳವಡಿಸಿ, ಬಳಿಕ ತನ್ನ ಅನುಯಾಯಿಗಳಿಗೆ ಅನುಸರಿಸಲು ತಿಳಿಸಿ, ಆ ಮೂಲಕ ಅರೇಬಿಯಾದ ಸಂಪೂರ್ಣ ಬದಲಾವಣೆ ಮಾಡಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದ ಅವರು, ತನ್ನ ಕ್ಷಮೆ, ಅಹಿಂಸೆಯ ಮಾನವ ಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.

ಒಂದು ಕೆನ್ನೆಗೆ ಬಾರಿಸಿದರೆ ಇನ್ನೊಂದು ಕೆನ್ನೆ ತೋರಿಸುವುದು ಅಹಿಂಸೆ ಅಲ್ಲ, ಅದು ಮೂರ್ಖತನ. ಹೊಡೆಯುವಾತನ‌ ಕೈ ಹಿಡಿಯುವುದು ಅಹಿಂಸೆಯಾಗಿದೆ. ಮನಸ್ಸು, ಕರ್ಮ, ಮಾತಿನ ಮೂಲಕ ಅಹಿಂಸೆಯ ಜೊತೆಗೆ ಸಹೋದರತೆಯನ್ನು ಇಸ್ಲಾಂ ಕಲಿಸಿದೆ. ಕುರ್ ಆನ್ ನಲ್ಲಿನ ಅಲ್ಲಾಹನ ಆದೇಶವೇ ಪ್ರವಾದಿ ಮುಹಮ್ಮದ್ (ಸ) ರವರ ಜೀವನವಾಗಿತ್ತು ಎಂದು ಅವರು ತಿಳಿಸಿದರು.

ಇಸ್ಲಾಂ ಧರ್ಮದಲ್ಲಿ ಆತಂಕವಾದ ಎಂಬುದಿಲ್ಲ. ಅಲ್ಲಿರುವುದು ದೇವನ ಆದೇಶ ಮತ್ತು ಪ್ರವಾದಿ ಮುಹಮ್ಮದ್ (ಸ) ರವರ ಆದರ್ಶಗಳು. ಶಾಂತಿಯ ಸಂದೇಶದ ಮೂಲಕ ಜನಸಾಮಾನ್ಯರಿಗೆ ಪ್ರವಾದಿ ಮುಹಮ್ಮದ್(ಸ) ರವರು ಇಸ್ಲಾಂ ತಲುಪಿಸಿದ್ದಾರೆಯೇ ಹೊರತು ಆತಂಕವಾದದಿಂದಲ್ಲ‌. ಆತಂಕವಾದವು ಇಸ್ಲಾಂ ಧರ್ಮದ ಸಂದೇಶವಲ್ಲ ಎಂದು ಅವರು ನುಡಿದರು.

ಮುಸಲ್ಮಾನರು ಕೇವಲ ನಮಾಝ್ ನಿರ್ವಹಿಸಿದರೆ ಮಾತ್ರ ಸ್ವರ್ಗ ಪ್ರಾಪ್ತವಾಗದು. ಸತ್ಕರ್ಮಗಳು ಕೂಡಾ ಇಸ್ಲಾಂ ನ ಭಾಗವಾಗಿದೆ. ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿ, ಅಲ್ಲಾಹನ ಮಾರ್ಗದಲ್ಲಿ ಸಾಗುವಂತೆ ಪ್ರವಾದಿ ಮುಹಮ್ಮದ್ (ಸ) ರವರು ಜನರಿಗೆ ಕರೆ ನೀಡಿದಾಗ ಹಲವಾರು ಸಂಕಷ್ಟ, ಸವಾಲುಗಳನ್ನು ಎದುರಿಸಬೇಕಾಯಿತು. ಆದರೂ ಕೂಡಾ ಅವರು ತಾಳ್ಮೆ ಕಳೆದುಕೊಳ್ಳದೆ ಮುನ್ನಡೆದು‌ ಬಳಿಕ ವೈರಿಗಳನ್ನು ಕೂಡಾ ಕ್ಷಮಿಸಿ ಜನನಾಯಕನಾಗಿದ್ದರು. ಅವರ ಬಗ್ಗೆ ಅಧ್ಯಯನ ನಡೆಸುವುದು ನಮ್ಮ ಜವಾಬ್ದಾರಿ ಎಂದು ಸ್ವಾಮೀಜಿ ತಿಳಿಸಿದರು.

ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮುಲ್ಲಾ, ನಾಗರಿಕ ಸಮಾಜವು ಇಂದು ವೈಜ್ಞಾನಿಕವಾಗಿ ಎಷ್ಟೋ ಮುಂದೆ ಹೋಗಿದೆ. ಆದರೆ ಮಾನವ ಸಮಾಜವನ್ನು ಉನ್ನತೀಕರಿಸುವ ವಿಷಯದಲ್ಲಿ ನಾವು ಸೋತಿದ್ದೇವೆ. ಮನುಷ್ಯ ಮನುಷ್ಯ ನ ನಡುವಿನ ಸಂಬಂಧವು ಇಂದು ಹಾಳಾಗಲು ನಮ್ಮ ನಡುವಿನ ಅಂತರಗಳು ಕಾರಣ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕರಾದ ಬಿ.ಎಂ. ಹನೀಫ್, ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅನಾರೋಗ್ಯಗಳು ದೊಡ್ಡ ದೊಡ್ಡ ಸಮಸ್ಯೆಯಾಗಿ ನಾವು ಹೇಳುತ್ತೇವೆ. ಆದರೆ ವಾಸ್ತವವಾಗಿ ಹೇಳಬೇಕೆಂದರೆ ಮನುಷ್ಯ ಮನುಷ್ಯನ ನಡುವಿನ ಬೆಳೆಯುತ್ತಿರುವ ದ್ವೇಷವು ದೊಡ್ಡ ಸಮಸ್ಯೆಯಾಗಿದೆ. ಅಂಧಕಾರದ ಸಮಯದಲ್ಲಿ ಪ್ರವಾದಿ ಮುಹಮ್ಮದ್(ಸ) ರವರು ಅರೇಬಿಯಾದ ಭೂಮಿಯಲ್ಲಿದ್ದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಿದ್ದು ಮನುಷ್ಯ ಮನುಷ್ಯರ ಮನಸ್ಸನ್ನು ಒಂದುಗೂಡಿಸುವ ಮೂಲಕವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಶಿಕ್ಷಣವನ್ನು ಪ್ರತಿಯೊಂದು ವ್ಯಕ್ತಿಗಳಿಗೆ ತಲುಪಿಸುವ ಕಾರ್ಯ ನಿರಂತರ ನಡೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಖ್ಯಾತ ಕಾದಂಬರಿಕಾರ ಕುಂ. ವೀರಭದ್ರಪ್ಪ, ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಸಮಾರಂಭದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

ದ.ಕ. ಸೀರತ್ ಅಭಿಯಾನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ವಿಷಯ ಮಂಡನೆ ಮಾಡಿ, ಅತಿಥಿಗಳನ್ನು ಸ್ವಾಗತಿಸಿದರು.

ದ.ಕ. ಸೀರತ್ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಸಿ.ಪಿ. ಹಬೀಬುರ್ರಹ್ಮಾನ್ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಅಧ್ಯಕ್ಷರಾದ ಮುಹಮ್ಮದ್ ಅಥ್ಹರುಲ್ಲಾ ಶರೀಫ್, ಕಾರ್ಯದರ್ಶಿ ಅಶ್ರಫ್ ಕೆ.ಎಂ., ಅಬ್ದುಸ್ಸಲಾಂ ಉಪ್ಪಿನಂಗಡಿ, ಮೌಲಾನಾ ಯಹ್ಯಾ ತಂಙಳ್ ಮದನಿ, ದ.ಕ. ಸೀರತ್ ಅಭಿಯಾನ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಪಿ.ಬಿ. ಅಬ್ದುಲ್ ಹಮೀದ್, ವೈ. ಮುಹಮ್ಮದ್ ಬ್ಯಾರಿ, ನಾಝಿಮ್, ಇಲ್ಯಾಸ್ ಇಸ್ಮಾಈಲ್, ಕೆ.ಕೆ. ಶಾಹುಲ್ ಹಮೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುಲ್ ಲತೀಫ್ ಆಲಿಯಾ ಕಿರಾಅತ್ ಪಡಿಸಿದರು. ಹುಸೈನ್ ಕಾಟಿಪಳ್ಳ ಹಾಗೂ ಆಸಿಫ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ತುಂಬೆ ಧನ್ಯವಾದಗೈದರು.