ಸನ್ಮಾರ್ಗ ವಾರ್ತೆ
ಚೆನ್ನೈ: ತಮಿಳುನಾಡಿನ ರಾನ್ನಿಪೇಟ್ಟ ಜಿಲ್ಲೆಯ ಜಾತಿ ಘರ್ಷಣೆಯಲ್ಲಿ ಇಬ್ಬರು ದಲಿತ ಯುವಕರು ಕೊಲೆಯಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ 10 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.
ಆರ್. ಸುರೇಂದ್ರನ್, ಆರ್. ಅಜಿತ್ , ಆರ್‍ಮಾಧವನ್ವಿ, ನಂದಕುಮಾರ್, ಎಸ್.ಕಾರ್ತಿಕ್, ಪಿ. ಸಕ್ತಿ ಬಂಧಿತ ಆರೋಪಿಗಳಾಗಿದ್ದಾರೆ.
ಅರಕೋಣಂ ನ ಜನ್‍ಪೇಟದಲ್ಲಿ ಬುಧವಾರ ರಾತ್ರಿ ಘರ್ಷಣೆ ನಡೆದಿತ್ತು. ಗೌತಮ್ ನಗರದ ದಲಿತ ಯುವಕರಾದ ಸೇಂಬಾಟ್ ಸೂರ್ಯ(26), ಸೋಕನ್ನೂರ್ ಅರ್ಜುನ್(25) ಘರ್ಷಣೆಯಲ್ಲಿ ಮೃತಪಟ್ಟಿದ್ದರು. ಇವರ ಜೊತೆ ಇದ್ದ ಮದನ್, ವಲ್ಲರಸು, ಸೌಂದರರಾಜನ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ವಿಧಾನಸಭಾ ಚುನಾವಣೆಯ ವೇಳೆ ಘಟನೆ ನಡೆದಿದ್ದು, ಸೂರ್ಯ ಮತ್ತು ಅರ್ಜುನ್ ದಲಿತ ಸಂಘಟನೆ ವಿಡುದಲೈ ಶಿರುತೈಗಳ್ ಪಾರ್ಟಿ ಅಭ್ಯರ್ಥಿ ಗೌತಮ್ ಗಾಗಿ ಸಕ್ರಿಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.
ವಣ್ಣಿಯಾರ್ ಸಮುದಾಯದ ಬೆಂಬಲ ಇರುವ ಎಐಡಿಎಂಕೆ ಅಭ್ಯರ್ಥಿ ಎಸ್. ರವಿ. ಪ್ರತಿಸ್ಪರ್ಧಿಯಾಗಿದ್ದಾರೆ.
ಬಸ್‍ಸ್ಟಾಂಡ್‍ನಲ್ಲಿ ದಲಿತ-ವಣ್ಣೀರ್ ಜಾತಿಗಳ ನಡುವೆ ಮಾತಿನ ಚಕಮಕಿ ಘರ್ಷಣೆಯಾಗಿ ಬೆಳೆದು ಕೊಲೆಯಲ್ಲಿ ಕೊನೆಗೊಂಡಿತ್ತು. ಘರ್ಷಣೆ ಸಾಧ್ಯತೆ ಮನಗಂಡು ರಾನ್ನಿ ಮತ್ತು ಸಮೀಪದ ಪ್ರದೇಶಗಳಲ್ಲಿ ಪೊಲೀಸರ ತುಕಡಿಯನ್ನು ನಿಯೋಜಿಸಲಾಗಿದೆ.












