ಲುಲು ಗ್ರೂಪ್ ಮಾಲಕ ಯೂಸುಫಲಿಯವರಿಗೆ ಅಬುಧಾಬಿಯ ಉನ್ನತ ಪ್ರಶಸ್ತಿ

0
8587

ಸನ್ಮಾರ್ಗ ವಾರ್ತೆ

ಅಬುಧಾಬಿ: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಲುಲು ಗ್ರೂಪ್ ಆಫ್ ಕಂಪನಿಯ ಮಾಲಕ ಎಂ‌.ಎ. ಯೂಸುಫಲಿಯವರ ಸಹಿತ 12 ಮಂದಿಗೆ ಅಬುಧಾಬಿ ಸರಕಾರದ ಉನ್ನತ ಗೌರವ ಸಂದಿದೆ.

ಯುಎಇ ವಾಣಿಜ್ಯ-ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿದ ಉತ್ತಮ ಬೆಂಬಲಕ್ಕಾಗಿ ಅವರಿಗೆ ಉನ್ನತ ನಾಗರಿಕ ಪ್ರಶಸ್ತಿಯಾದ ಅಬುಧಾಬಿ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಅಬುಧಾಬಿ ಅಲ್ ಹೊಸನ್ ಪರಂಪರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿಯ ದೊರೆ ಮತ್ತು ಯುಎಇ ಸೈನ್ಯದ ಉಪ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಪ್ರಶಸ್ತಿ ನೀಡಿದರು.

ತುಂಬಾ ವಿನಯ ಮತ್ತು ಅಭಿಮಾನದಿಂದ ಅಬುಧಾಬಿ ಸರಕಾರದ ಈ ಪ್ರಶಸ್ತಿಯನ್ನು ಪರಿಗಣಿಸಿದ್ದೇನೆ ಎಂದು ಪ್ರಶಸ್ತಿ ಪಡೆದ ಬಳಿಕ ಯೂಸುಫಲಿ ಹೇಳಿದರು.

47 ವರ್ಷಗಳಿಂದ ಅವರು ಅಬುಧಾಬಿಯಲ್ಲಿದ್ದಾರೆ. ಈ ದೇಶದ ದೂರದೃಷ್ಟಿಯ ಮತ್ತು ಸ್ಥಿರ ಉತ್ಸಾಹದ ಆಡಳಿತಗಾರರೊಡನೆ ವಿಶೇಷವಾಗಿ ಅಬುಧಾಬಿಯ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್‍ರಿಗೆ ನಾನು ಕೃತಜ್ಞತೆ ಸಲ್ಲಿಸುವೆ ಎಂದು ಯೂಸುಫಲಿ ಹೇಳಿದರು.

ಇಂದು ನಾನು ಏನಾದರೂ ಆಗಿದ್ದರೆ ಅದಕ್ಕೆ ಯುಎಇ ಎಂಬ ಮಹಾನ್ ದೇಶದ ಆಡಳಿತಗಾರರು ಮತ್ತು ಇಲ್ಲಿ ವಾಸಿಸುವ ಸ್ವದೇಶಿಗಳ, ಭಾರತೀಯರ ಸಹಿತ ಎಲ್ಲ ಅನಿವಾಸಿ ಸಮುದಾಯದ ಬೆಂಬಲ, ಪ್ರಾರ್ಥನೆಗಳಿಂದ ಆಗಿದೆ ಎಂದು ಯೂಸುಫಲಿ ಹೇಳಿದರು.

ಈ ವರ್ಷ ಪ್ರಶಸ್ತಿ ಸಿಕ್ಕಿರುವ ಏಕೈಕ ಭಾರತೀಯ ಯೂಸುಫಲಿ ಆಗಿದ್ದಾರೆ. 2005ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್, 2008ರಲ್ಲಿ ಪದ್ಮಶ್ರೀ ಪುರಸ್ಕಾರ, 2014ರಲ್ಲಿ ಬಹೈರ್ ದೊರೆಯ ಆರ್ಡರ್ ಆಫ್ ಬಹ್ರೈನ್, 2017ರಲ್ಲಿ ಬ್ರಿಟಿಷ್ ರಾಣಿಯ ಕ್ವಿನ್ಸ್ ಪ್ರಶಸ್ತಿ ಹೀಗೆ ವಿವಿಧ ಪ್ರಶಸ್ತಿಗಳು ಯೂಸುಫಲಿಯವರಿಗೆ ಸಿಕ್ಕಿದೆ.

ಯುಎಇ, ಸೌದಿ ಅರೇಬಿಯಾ ಸಹಿತ ಹಲವು ದೇಶಗಳ ಅನಿವಾಸಿಗಳಿಗೆ ನೀಡುವ ಮೊದಲ ಅಜೀವವಾಧಿ ವಾಸ್ತವ್ಯ ವೀಸಾಕ್ಕೆ ಯೂಸುಫಲಿ ಅರ್ಹರಾಗಿದ್ದಾರೆ.

ಯುಎಇ ಉಪಪ್ರಧಾನಿ, ಗೃಹ ಸಚಿವ ಶೇಖ್ ಸೈಫ್ ಬಿನ್ ಝಾಯಿದ್ ಅಲ್ ನಹ್ಯಾನ್, ಸಚಿವ ಶೇಖ್ ಮನ್ಸೂರ್ ಬಿನ್ ಝಾಯಿದ್ ಅಲ್ ನಹ್ಯಾನ್, ಅಬುಧಾಬಿ ಎಕ್ಸಿಕ್ಯೂಟಿವ್ ಆಫೀಸ್ ಚೇರ್‍ಮೆನ್ ಶೇಖ್ ಖಾಲಿದ್ ಬಿನ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಮುಂತಾದ ಪ್ರಮುಖರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.