ಬಡತನ: ಹೆತ್ತ ಕರುಳ ಕುಡಿಯನ್ನೇ ಮಾರಿದ ಅಸಹಾಯಕ ತಾಯಿ

0
485

ಮೂವಾಟ್ಟುಪುಝ,ಮಾ.16: ಮಗು ಜನಿಸಿದ ಏಳು ದಿನಕ್ಕೆ ಮಗುವನ್ನು ಮಹಿಳೆಯೊಬ್ಬರು ಮಾರಿದ ಘಟನೆ ಮೂವಾಟ್ಟುಪುಝದಲ್ಲಿ ನಡೆದಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು ತನ್ನ ಏಳು ದಿನ ಪ್ರಾಯದ ಹೆತ್ತ ಕೂಸನ್ನು ಆಸ್ಪತ್ರೆಯಲ್ಲಿಯೇ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದರಲ್ಲದೇ; ಮಗುವನ್ನು ಪಡೆದ ದಂಪತಿಗಳನ್ನು ಕೂಡ ಪೊಲೀಸರು ಬಂಧಿಸಿ ಮೂವಾಟ್ಟುಪುಝ ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಕೋರ್ಟು ಮೂವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ತದನಂತರ ಮಗುವನ್ನು ದಂಪತಿಗಳು ಅದರ ತಾಯಿಗೆ ಒಪ್ಪಿಸಿದ್ದಾರೆ.

ಕಳೆದ 26ನೇ ತಾರೀಕಿಗೆ ಬೆಳಗ್ಗೆ 1:30ಕ್ಕೆ 28 ವರ್ಷ ಮಹಿಳೆಯು ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಮಹಿಳೆಯ ಐದನೆ ಹೆರಿಗೆಯಾಗಿತ್ತು. ಅಂದೇ ಅವರು ಸಂಜೆ ಮೂರು ಗಂಟೆಗೆ ಮಹಿಳೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು ಮತ್ತು ಇಲ್ಲಿಯೇ ಮಕ್ಕಳಲಿಲ್ಲದ ದಂಪತಿಗೆ ತನ್ನ ಮಗುವನ್ನು ಮಹಿಳೆ ಮಾರಾಟ ಮಾಡಿದ್ದಾರೆ. ಮಹಿಳೆಗೆ ಈಗಾಗಲೇ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಇವೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಮಹಿಳೆ ಗರ್ಭಿಣಿಯಾದ ಬಳಿಕ ಪತಿ ಅವರತ್ತ ತಿರುಗಿಯೂ ನೋಡಿರಲಿಲ್ಲ.ಆದ್ದರಿಂದ ಮಹಿಳೆಗೆ ಮತ್ತು ಮಕ್ಕಳಿಗೆ ಒಂದು ಹೊತ್ತಿನ ಊಟ ಕೂಡ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಇವರು ಮಗುವನ್ನು ಮಾರಲು ಸಜ್ಜಾದರೆಂದು ಪೊಲೀಸರು ಹೇಳಿದ್ದಾರೆ. ಮಹಿಳೆ ಮಗು ಇಲ್ಲದೆ ಮನೆಗೆ ಬಂದ ಘಟನೆ ಇತರರಿಗೆ ತಿಳಿಯಿತು. ಇದನ್ನು ಸಮೀಪದ ಮನೆಯವರು ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರು ಮಹಿಳೆಯನ್ನು ಮತ್ತು ಮಗುವನ್ನು ದತ್ತಕ್ಕೆ ಪಡೆದ ದಂಪತಿಯನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ ಬಂಧಿಸಿದರು. ಮಕ್ಕಳಿಲ್ಲದ ದಂಪತಿಗೆ ಹಣ ಪಡೆಯದೆಯೇ ಮಗುವನ್ನು ಮಹಿಳೆ ಕೊಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಮಗು ಪಡೆದ ದಂಪತಿ ಮಹಿಳೆಗೆ ಹಣ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.