ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದ ರಾಜರ್ಹತ್ ನ್ಯೂ ಟೌನ್ ಕ್ಷೇತ್ರದ ಮತದಾರರು ಮತ ಎಣಿಕೆಯಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿದ್ದಾರೆ. ಬಹುಪಾಲು ಮುಸ್ಲಿಂ ಮತದಾರರು ಇರುವ ಒಂದು ನಿರ್ದಿಷ್ಟ ಭೂತ್ ನಲ್ಲಿ ಬಿಜೆಪಿಯ ಭರ್ಜರಿ ಗೆಲುವು ಮತದಾರರನ್ನು ಮತ್ತು ತೃಣಮೂಲ ಕಾಂಗ್ರೆಸ್ಸನ್ನು ಆಘಾತಕ್ಕೆ ತಳ್ಳಿದೆ. ಸಿಪಿಎಂ ಮೈತ್ರಿಕೂಟದ ಅಭ್ಯರ್ಥಿ ಸಪ್ತರ್ಷಿ ದೇವ್ ಅವರು ಬೂತ್ ನಂಬರ್ 164 ರಲ್ಲಿ ಕೇವಲ ಒಂದು ಮತವನ್ನು ಮಾತ್ರ ಪಡೆದಿದ್ದಾರೆ. ಟಿಎಂಸಿ ಅಭ್ಯರ್ಥಿ ಇದೇ ಬೂತ್ ನಲ್ಲಿ ಕೇವಲ ಐದು ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿಯೂಷ್ ಒಟ್ಟು ಚಲಾವಣೆಯಾದ 656 ಮತಗಳಲ್ಲಿ 637 ಮತಗಳನ್ನು ಪಡೆದಿದ್ದಾರೆ. ಬೂತ್ ನಂಬರ್ 164 ಮತ್ತು 165ರಲ್ಲಿ ಮುಸ್ಲಿಮರೇ ಬಹು ಸಂಖ್ಯಾತರಾಗಿದ್ದಾರೆ.
ಎರಡು ಬೂತ್ ಗಳಲ್ಲಿ ಒಂದೇ ಕುಟುಂಬದ ಸದಸ್ಯರು ಮತ ಚಲಾಯಿಸಿದ್ದಾರೆ. ಪಕ್ಕದ ಬೂತ್ 165 ರಲ್ಲಿ ಬಿಜೆಪಿ ಕೇವಲ 32 ಮತಗಳನ್ನು ಪಡೆದಿದೆ. ಕಮ್ಯುನಿಸ್ಟ್ ಅಭ್ಯರ್ಥಿ 299 ಮತಗಳನ್ನು ಪಡೆದಿದ್ದಾರೆ. ಟಿಎಂಸಿ 290 ಮತಗಳನ್ನು ಪಡೆದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ 88 %ರಷ್ಟು ಮುಸ್ಲಿಂ ಮತದಾರರು ಇರುವ ಬೂತ್ ಸಂಖ್ಯೆ 164 ರಲ್ಲಿ ಬಿಜೆಪಿ ಶೇಕಡ 97 ರಷ್ಟು ಮತಗಳನ್ನು ಪಡೆದಿದೆ. ಇದು ಪ್ರದೇಶದ ರಾಜಕೀಯ ಸಂದರ್ಭದಲ್ಲಿ ಹೊಂದಿಕೆಯಾಗುವುದಿಲ್ಲ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.












