ಅಲ್ಮೈಡಾ ಗ್ಲಾಡ್ಸನ್
ವಾಹನ ಮಾರಾಟ ಕಳೆದ ಹತ್ತೊಂಬತ್ತು ವರುಷಗಳಲ್ಲೇ ನಿಕೃಷ್ಟ ಮಟ್ಟ ತಲುಪಿದೆ. ಅಶೋಕ್ ಲೇಯ್ಲ್ಯಾಂಡ್, ಟಾಟಾ ಮೋಟಾರ್ಸ್, ಹೊಂಡಾ ಮುಂತಾದ ಕಂಪನಿಗಳು ತಮ್ಮ ಕೆಲವು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಟಾಟಾದ ಕೆಲವು ಘಟಕಗಳಲ್ಲಿ ತಿಂಗಳಿಗೆ ಬರೀ ಹದಿನೈದು ದಿನಗಳ ಕಾಲ ಮಾತ್ರ ಕೆಲಸ ನಡೆಯುತ್ತಿದೆ ಹಾಗೂ ಈಗಾಗಲೇ ನೂರಾರು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿದೆ.
ಈವಾಗ ದೇಶದ ಎರಡನೇ ದೊಡ್ಡ ವಾಹನ ತಯಾರಕರಾದ ಹ್ಯೂಂಡೈ ಮೋಟಾರ್ಸ್ ವಾಹನ ಮಾರಟದಲ್ಲಾಗಿರುವ ಗಣನೀಯ ಇಳಿಕೆಯನ್ನು ಸರಿದೂಗಿಸಲು No Production Day ಆರಂಭಿಸಿದೆಯಾದರೆ ಸುಝುಕಿ ಕಂಪನಿ ಮೂರು ಸಾವಿರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಮಹೀಂದ್ರಾ ಮೋಟಾರ್ಸ್ ಸರಕಾರ ತಮ್ಮ ನೆರವಿಗೆ ಬರಬೇಕೆಂದು ಬಹಿರಂಗವಾಗಿಯೇ ಕೇಳಿಕೊಂಡಿದೆ. ಯಮಾಹಾ ಕಂಪನಿ, ಬಿಡಿಭಾಗಗಳ ತಯಾರಕರಾದ ವ್ಯಾಲಿಯೋ ಹಾಗೂ ಸುಬ್ರೋ 1,700 ಕೆಲಸಗಾರರನ್ನು ಈಗಾಗಲೇ ತೆಗೆದುಹಾಕಿದೆ. ವಾಹನಗಳ ಸ್ವಯಂಚಾಲಿತ ಬಿಡಿಭಾಗಗಳ ತಯಾರಕರಾದ Wheels India ಎಂಟುನೂರು ಕೆಲಸಗಾರರನ್ನು ನಷ್ಟದ ಕಾರಣ ತೋರಿಸಿ ಕೆಲಸದಿಂದ ತೆಗೆದುಹಾಕಿದೆ. ಸುಝುಕಿಯನ್ನು ಹೊರತುಪಡಿಸಿ 15 ಇತರ ವಾಹನ ತಯಾರಕಾ ಕಂಪನಿಗಳು ಒಟ್ಟು 7% ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದಿದೆ.
ಇನ್ನು ಜನರಲ್ ಮೋಟಾರ್ಸ್, ಟೊಯೋಟಾ, ವೋಲ್ವೋ, ಟಾಟಾ ಮುಂತಾದ ವಾಹನ ತಯಾರಕರಿಗೆ ವಾಹನದ ಪೂರಕ ಹಾಗೂ ಬಿಡಿಭಾಗಗಳನ್ನು ಪೂರೈಸುವ ದೇಶದ ಅತೀ ದೊಡ್ಡ ಹಾಗೂ ವಿಶ್ವದ ಮೂರನೇ ಅತೀ ದೊಡ್ಡ suspension system Automotive ಕಂಪನಿ ಜಾಮ್ನಾ ಆಟೋ ಇಂಡಸ್ಟ್ರೀಸ್ ತನ್ನ ಒಂಬತ್ತೂ ಉತ್ಪಾದನಾ ಘಟಕಗಳನ್ನು ಮುಚ್ಚಿದೆ. ಕಳೆದ ಮೂರು ತಿಂಗಳುಗಳಲ್ಲಿ ಇನ್ನೂರ ತೊಂಬತ್ತಕ್ಕಿಂತ ಹೆಚ್ಚು ವಾಹನಗಳ ಶೋ ರೂಮ್ಸ್ ಮುಚ್ಚಿ ಹೋಗಿವೆ. ಈ ವಲಯದಲ್ಲಿ ಕಳೆದ ಮೂರು ತಿಂಗಳಲ್ಲಿ ಕೆಲಸ ಕಳೆದುಕೊಂಡಿರುವವರು ಮೂರುವರೆ ಲಕ್ಷ ಜನರಾದರೆ ಈ ವರುಷದ ಆರಂಭದಿಂದ ಇದುವರೆಗೆ ಕೆಲಸ ಕಳೆದುಕೊಂಡಿರುವವರ ಸಂಖ್ಯೆ ಸುಮಾರು 4,65,000 (ನಾಲ್ಕು ಲಕ್ಷ ಅರವತ್ತೈದು ಸಾವಿರ). Automotive Component Manufacturers Association of India (ACMA) ಇತ್ತೀಚಿನ ವರದಿಗಳ ಪ್ರಕಾರ ಸದ್ಯದ ಈ ಆರ್ಥಿಕ ಮುಗ್ಗಟ್ಟನ್ನು ತಡೆಯದಿದ್ದರೆ, ಈ ವರುಷ ಅಂತ್ಯದೊಳಗೆ ವಾಹನ ಕ್ಷೇತ್ರದಲ್ಲೇ ಒಟ್ಟು ಹತ್ತು ಲಕ್ಷ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಿದೆ.
ಆದರೆ ದೇಶದ ಬಹುತೇಕ ಜನರಿಗೂ, ಸರಕಾರಕ್ಕೂ ಇದು ಮುಖ್ಯವಲ್ಲ. ಸದ್ಯಕ್ಕೆ ನಮಗೆ ಆರ್ಟಿಕಲ್ 370, ಪಾಕೀಸ್ಥಾನದ ಮೇಲೆ ಅಣ್ವಸ್ತ್ರ ಪ್ರಯೋಗ, ಪಾಕೀಸ್ಥಾನವನ್ನು ಯುದ್ದ ಮಾಡಿ ಸಂಪೂರ್ಣವಾಗಿ ನಾಶ ಮಾಡುವುದು, ಸಾಧ್ಯವಿದ್ದಷ್ಟೂ ಮುಸ್ಲೀಮರನ್ನು ಗೋಹತ್ಯೆ, ಭಯೋತ್ಪಾದನೆಯ ಕಾರಣಗಳನ್ನು ಮುಂದಿಟ್ಟುಕೊಂಡು ಹೊಡೆಯುವುದು, ಕೊಲ್ಲುವುದು ಮುಖ್ಯ. ಈ ಕ್ಷೇತ್ರಗಳಲ್ಲೇ ಕಳೆದ ಆರು ವರುಷಗಳಲ್ಲಿ ಗರಿಷ್ಟ ಪ್ರಮಾಣದ ಪೂರ್ಣಾವಧಿ ಉದ್ಯೋಗ ಸೃಷ್ಟಿಯಾಗಿರೋದು. ಇನ್ನು ಸಂಸ್ಕೃತಿ ರಕ್ಷಣೆ, ಧರ್ಮ ರಕ್ಷಣೆ, ಗೋರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಸೃಷ್ಟಿಯಾಗಿರುವ ಗುತ್ತಿಗೆ ನೌಕರರ ಪ್ರಮಾಣವೂ ಉತ್ತುಂಗದಲ್ಲಿದೆ. ಹಾಗಾಗಿ ದೇಶದೆಲ್ಲೆಡೆ ನೌಕರಿ ಕಳೆದುಕೊಳ್ಳುತ್ತಿರುವ ಲಕ್ಷಾಂತರ ಮಂದಿಯ ನೋವು, ಹತಾಶೆ ನಮ್ಮ ಅರಿವಿಗೆ ಬರುತ್ತಿಲ್ಲ. ಇನ್ನು ಅರಿವಿಗೆ ಬಂದರೆ ಜೈಶ್ರೀರಾಮ್, ಜೈಹಿಂದ್ ಎಂದು ದಿನಕ್ಕೆ ನಾಲ್ಕಾರು ಬಾರಿ ಹೇಳಿ, ಬರೀ ನಿಮ್ಮ ನಿಮ್ಮ ಮನೆಗಳಲ್ಲಿ, ಪಟ್ಟಣಗಳಲ್ಲಿ ಮಾತ್ರವಲ್ಲ ದೇಶದ ಸಂಸತ್ತಿನಲ್ಲೂ ಹೇಳಿ. ಎಲ್ಲಾ ಸಮಸ್ಯೆಗಳು ಮಾಯವಾಗೋಲ್ವಾ ನೋಡಿ.












