ಅಸ್ಸಾಂ ಅಂತಿಮ ಪೌರತ್ವ ಪಟ್ಟಿ ನಾಳೆ; 41 ಲಕ್ಷ ಮಂದಿ ಆತಂಕದಲ್ಲಿ

0
745

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 30: ಅಸ್ಸಾಮಿನ ಅಂತಿಮ ಪೌರತ್ವ ಪಟ್ಟಿ ನಾಳೆ ಪ್ರಕಟವಾಗಲಿದ್ದು 41 ಲಕ್ಷ ಮಂದಿಯ ಜೀವನ ಆತಂಕದಲ್ಲಿದೆ. ಶನಿವಾರ ಹತ್ತು ಗಂಟೆಗೆ ಆನ್‍ಲೈನ್ನಲ್ಲಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಸುಮಾರು ಒಂದು ವರ್ಷದ ಪ್ರಕ್ರಿಯೆ ಬಳಿಕ ಪಟ್ಟಿ ಪ್ರಕಟಿಸಲಾಗುತ್ತಿದೆ.

ಪಟ್ಟಿಯಿಂದ ಹೊರಗಿರುವವರನ್ನು ತಕ್ಷಣ ವಿದೇಶಿಗಳೆಂದು ಘೋಷಿಸುವುದಿಲ್ಲ ಎನ್ನಲಾಗಿದೆ. ಪಟ್ಟಿಯಿಂದ ಹೊರಗುಳಿದವರು ಟ್ರಿಬ್ಯೂನಲ್‍ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸಂಬಂಧಿಸಿ ದೂರು ಪರಿಹರಿಸಲು 1000 ಟ್ರಿಬ್ಯೂನಲ್‍ಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

1951ರಲ್ಲಿ ಅಸ್ಸಾಮ್‍ನಲ್ಲಿ ಮೊದಲ ಬಾರಿ ಪಟ್ಟಿ ಪ್ರಕಟಿಸಲಾಗಿತ್ತು. 1971ರಲ್ಲಿ ಬಂಗ್ಲಾದೇಶ ರೂಪುಗೊಂಡ ಬಳಿಕ ಅಸ್ಸಾಮ್‍ಗೆ ವಲಸೆ ಬಂದವರನ್ನು ಕಂಡು ಹುಡುಕಲು ಪಟ್ಟಿಯನ್ನು ಪುನಃ ಪ್ರಕಟಿಸಬೇಕೆಂದು ಸುಪ್ರೀಂಕೋರ್ಟು ಸೂಚಿಸಿತ್ತು. ಪೌರತ್ವ ಪಟ್ಟಿ ಪ್ರಕಟಿಸುವ ಮೊದಲು ಈಶಾನ್ಯ ರಾಜ್ಯಗಳ ಸುರಕ್ಷೆಯನ್ನು ಬಲಪಡಿಸಲಾಗಿದೆ. 20000 ಬಿಎಸ್‍ಎಫ್ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.