ಸನ್ಮಾರ್ಗ ವಾರ್ತೆ
ಬಲ್ಲಿಯ,ಆ.30: ಪ್ರಾಥಮಿಕ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ಮಧ್ಯಾಹ್ನದೂಟವನ್ನು ಬೇರೆ ಮಕ್ಕಳಿಂದ ಪ್ರತ್ಯೇಕವಾಗಿಸಿ ನೀಡಲಾಗುತ್ತಿರುವ ಘಟನೆಯು ಉತ್ತರಪ್ರದೇಶದ ಬಲ್ಲಿಯದಲ್ಲಿ ನಡೆದಿದೆ. ಘಟನೆಯ ವೀಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಸರಕಾರ ತನಿಖೆಗೆ ಆದೇಶ ಹೊರಡಿಸಿದೆ.ಶಾಲೆಯ ಅಧಿಕಾರಿಗಳು ಕೊಡುವ ಪಾತ್ರೆಯಲ್ಲಿ ಹಿಂದುಳಿದ ಜಾತಿಯ ಮಕ್ಕಳು ಊಟ ಮಾಡಿದರೆ ಮೇಲ್ವರ್ಗದ ಮಕ್ಕಳು ಊಟ ಮಾಡುವುದಿಲ್ಲ.ಆದ್ದರಿಂದ ಇವರು ಮನೆಯಿಂದ ಪಾತ್ರೆಗಳನ್ನು ತರುತ್ತಾರೆ.
ಘಟನೆಯ ವೀಡಿಯೊ ನೋಡಿ ನಿಜಸ್ಥಿತಿಯನ್ನು ನೇರವಾಗಿ ಅರಿಯಲು ಜಿಲ್ಲೆಯ ಮ್ಯಾಜಿಸ್ಟ್ರೇಟ್ ಡಾ.ಭವಾನಿ ಸಿಂಗ್ ಕನಗಾರೌತ್ ಸಂದರ್ಶಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ದಲಿತ ವಿದ್ಯಾರ್ಥಿಗಳ ತಾರತಮ್ಯ ಗಮನಕ್ಕೆ ಬಂದಿಲ್ಲವಾದರೂ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು. ಮಕ್ಕಳು ಸಣ್ಣ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ಶಾಲೆಯ ಪ್ರಿನ್ಸಿಪಾಲ್ ಪುರುಷೋತ್ತಮ್ ಗುಪ್ತ ಪ್ರತಿಕ್ರಿಯಿಸಿದ್ದಾರೆ.
ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಘಟನೆಯ ಕುರಿತು ಆತಂಕವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅತಿ ಹೆಚ್ಚು ನೋವು ತಂದ ಸುದ್ದಿಯಿದು ಮತ್ತು ಇದನ್ನು ಖಂಡಿಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇಂತಹ ತಾರತಮ್ಯಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.












