ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.2: ರಾಜಸ್ತಾನದ ರಾಜ್ಯಪಾಲ ಹುದ್ದೆಯಿಂದ ಹೊರ ಹೋಗುತ್ತಿರುವ ಕಲ್ಯಾಣ್ ಸಿಂಗ್ರನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ರಾಜ್ಯಪಾಲರ ಸ್ಥಾನಮಾನದಲ್ಲಿರುವ ವ್ಯಕ್ತಿಗೆ ಸಂವಿಧಾನದ ರಕ್ಷಣೆ ಇರುವುದರಿಂದ ಅಷ್ಟೂ ಕಾಲ ಅವರನ್ನು ವಿಚಾರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ರಾಜ್ಯಪಾಲರ ಹುದ್ದೆಯ ಅವಧಿ ಮುಗಿದಿದೆ.
1992ರಲ್ಲಿ ಕಲ್ಯಾಣ್ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಬಾಬರಿ ಮಸೀದಿಯನ್ನು ಕರಸೇವಕರು ಕೆಡವಿದ್ದರು. ಅವರ ವಿರುದ್ಧ ಬಾಬರಿ ಧ್ವಂಸಕ್ಕೆ ಸಂಚು ಹೆಣೆದ ಆರೋಪವನ್ನು ಸಿಬಿಐ ಹೊರಿಸಿತ್ತು. ರಾಜ್ಯಪಾಲರ ಹುದ್ದೆ ಇಲ್ಲದಾದರೆ ಕಾನೂನುಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು 2017ರಲ್ಲಿ ಸುಪ್ರೀಂಕೋರ್ಟು ಸೂಚಿಸಿತ್ತು.
ಕಳೆದ ದಿವಸ ರಾಜಸ್ಥಾನದ ನೂತನ ರಾಜ್ಯಪಾಲರಾಗಿ ಕಲ್ರಾಜ್ ಮಿಶ್ರಾ ನೇಮಕವಾಗಿದ್ದಾರೆ. ಸೆಪ್ಟಂಬರ್ ಮೂರಕ್ಕೆ ಕಲ್ಯಾಣ್ ಸಿಂಗ್ ರಾಜ್ಯಪಾಲರಾಗಿ ಐದು ವರ್ಷ ಅವಧಿ ಪೂರ್ತಿಗೊಳಿಸುತ್ತಿದ್ದಾರೆ. ಸಂವಿಧಾನದ ಪರಿಚ್ಛೇದ 361ರ ಪ್ರಕಾರ ರಾಜ್ಯಪಾಲರ ವಿರುದ್ಧ ಅವರು ಆ ಹುದ್ದೆಯಲ್ಲಿರುವಷ್ಟು ಕಾಲ ಕಾನೂನು ಕ್ರಮ ಕೈಗೊಳ್ಳಲಾಗದು. ಕಲ್ಯಾಣ್ ಸಿಂಗ್ ಅಲ್ಲದೆ ಬಿಜೆಪಿ ನಾಯಕ ಎಲ್ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿಯವರ ವಿರುದ್ಧ ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ಹೆಣೆದ ಆರೋಪವನ್ನು ಸಿಬಿಐ ವಿಶೇಷ ಕೋರ್ಟು ಹೊರಿಸಿದೆ. ಗಲಭೆ ಸಾಧ್ಯತೆ ಗೊತ್ತಿದ್ದೂ ಕಲ್ಯಾಣ ಸಿಂಗ್ ಅದನ್ನು ತಡೆದಿಲ್ಲ ಎಂದು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.












