1949ರಲ್ಲಿ ಬಾಬರಿ ಮಸೀದಿಯೊಳಗೆ ಅಧಿಕಾರಿಗಳ ಒತ್ತಾಶೆಯಲ್ಲಿ ವಿಗ್ರಹಗಳನ್ನು ಸ್ಥಾಪಿಸಲಾಗಿದೆ: ಸುನ್ನಿ ವಕ್ಫ್ ಮಂಡಳಿ

0
517

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.4: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯೊಳಗೆ 1949 ಡಿಸೆಂಬರ್ 22, 23 ರಂದು ಮಧ್ಯರಾತ್ರೆ ಸೂತ್ರಬದ್ಧ ಗೂಢಾಲೋಚನೆಯಂತೆ ಮೂರ್ತಿಗಳನ್ನು ಇರಿಸಲಾಗಿದೆ. ಇದರಲ್ಲಿ ಕೆಲವು ಅಧಿಕಾರಿಗಳ ಒತ್ತಾಶೆ ಇತ್ತು ಎಂದು ಸುನ್ನಿ ವಕ್ಫ್ ಬೋರ್ಡಿಗಾಗಿ ಹಾಜರಾದ ಎಂ.ಸಿದ್ದೀಕ್ ಮತ್ತು ಬಾಬರಿ ಭೂಮಿ ವಿವಾದ ಪ್ರಕರಣದಲ್ಲಿ ಹದಿನೆಂಟನೆಯ ದಿವಸ ವಾದ ಮುಂದುವರಿದಾಗ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಮುಂದೆ ರಾಜೀವ್ ಧವನ್ ವಿಷಯವನ್ನು ತಿಳಿಸಿದರು.

ಬಲವಾದ ನಿರ್ದೇಶ ಇದ್ದರೂ ಫೈಝಾಬಾದಿನ ಮಾಜಿ ಡೆಪ್ಯುಟಿ ಕಮಿಶನರ್ ಕೆ.ಕೆ. ನಾಯರ್ ಮೂರ್ತಿಗಳನ್ನು ತೆರವುಗೊಳಿಸಲು ಅನುಮತಿ ನೀಡಲಿಲ್ಲ. ಯಥಾರ್ಥದಲ್ಲಿ ಮೂರ್ತಿ ಪ್ರತಿಷ್ಠಾಪನೆ ಒಂದು ಅದ್ಭುತ ಘಟನೆಯಲ್ಲ. ಅದರ ಹಿಂದೆ ಸಂಚು ಇದೆ. ನಂತರ ಕೆಕೆ ನಾಯರ್ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಮಾತ್ರವಲ್ಲ 1528ರಲ್ಲಿ ವಿಕ್ರಮಾದಿತ್ಯ ನಿರ್ಮಿಸಿದ ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿದ್ದರು. 1949 ಡಿಸೆಂಬರ್ 16ಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದು ರಾಜೀವ್ ಧವನ್ ಹೇಳಿದರು.

ಆರಾಧನೆಗೆ ನಿಷೇಧ ಹೇರಿದಾಗ ಮುಸ್ಲಿಮರು ಏನು ಮಾಡಿದರು ಎಂದು ಕೋರ್ಟು ಪ್ರಶ್ನಿಸಿದಾಗ ಅವರು ವಕ್ಫ್ ಬೋರ್ಡ್ ಇನ್ಸ್‍ಪೆಕ್ಟರ್‌ಗೆ ದೂರು ನೀಡಿದರು.ಆದರೆ ಆರಾಧನೆ ಮಾಡಲು ಅನುಮತಿ ನೀಡಲಾಗಿಲ್ಲ ಎಂದು ಧವನ್ ಉತ್ತರಿಸಿದರು.