ಸನ್ಮಾರ್ಗ ವಾರ್ತೆ
ಕೈರೊ, ಸೆ. 5: ಇತ್ತೀಚೆಗೆ ನಿಗೂಢ ರೀತಿಯಲ್ಲಿ ಮೃತಪಟ್ಟ ಈಜಿಪ್ಟಿನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ಪುತ್ರ ಅಬ್ದುಲ್ಲ ಮುರ್ಸಿ(24) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಕೈರೊದ ದಕ್ಷಿಣ ಭಾಗದಲ್ಲಿರುವ ಗಿಸಾದ ಆಸ್ಪತ್ರೆಯಲ್ಲಿ ಅವರು ನಿಧನರಾದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮುರ್ಸಿಯವರ ಕಿರಿಯ ಪುತ್ರರಾಗಿರುವ ಅಬ್ದುಲ್ಲರ ನಿಧನ ವಾರ್ತೆಯನ್ನು ಕುಟುಂಬ ದೃಢೀಕರಿಸಿದೆ. ಈಜಿಪ್ಟಿನಲ್ಲಿ ಮೊದಲ ಬಾರಿ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆದ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಮುರ್ಸಿಯವರು ಕಳೆದ ಜೂನ್ 17 ರಂದು ಕೋರ್ಟಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಇವರ ಸಾವಿನಲ್ಲಿ ಸುರಕ್ಷಾ ಅಧಿಕಾರಿಗಳ ಕರಾಳ ಹಸ್ತವಿದೆ ಎಂಬ ಆರೋಪವು ಬಲವಾಗಿ ಕೇಳಿ ಬಂದಿತ್ತು. ತಂದೆ ಮೃತಪಟ್ಟು 78 ದಿವಸಗಳ ಬಳಿಕ ಅಬ್ದುಲ್ಲ ಕೂಡ ನಿಧನರಾದರು.











