ಮಕ್ಕಳನ್ನು ಪ್ರೀತಿಸುವುದಷ್ಟೇ ಅಲ್ಲ, ಅವರ ಮನಸ್ಸನ್ನೂ ಅರಿಯೋಣ

0
5

✍️ ಮುಹಮ್ಮದ್ ರಝಾ ಮಾನ್ವಿ

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಇಸ್ಲಾಮಿನ ಪಾಲನೆ-ಪೋಷಣೆಯ ಮೌಲ್ಯಗಳ ಕುರಿತು ಚಿಂತನೆ

ನವೆಂಬರ್ 14 ಮಕ್ಕಳ ದಿನಾಚರಣೆ. ಮಕ್ಕಳ ನಗು, ಮುಗ್ಧತೆ ಮತ್ತು ಕನಸುಗಳನ್ನು ಸಂಭ್ರಮಿಸುವ ಈ ದಿನವು ಅವರ ಭವಿಷ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವೂ ಹೌದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ಸಾಕೇ? ಅವರಲ್ಲಿ ಮಾನವೀಯತೆ, ನೈತಿಕತೆ, ಕರುಣೆ ಮತ್ತು ಜವಾಬ್ದಾರಿಯ ಪ್ರಜ್ಞೆ ಬೆಳೆಸುವುದು ನಮ್ಮ ಕರ್ತವ್ಯವಲ್ಲವೇ?

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು 1889ರ ನವೆಂಬರ್ 14ರಂದು ಜನಿಸಿದರು. ಮಕ್ಕಳ ಮೇಲಿನ ಅವರ ಅಪಾರ ಪ್ರೀತಿಯಿಂದಾಗಿ ‘ಚಾಚಾ ನೆಹರೂ’ ಎಂದೇ ಪ್ರಸಿದ್ಧರಾಗಿದ್ದರು. ಅವರ ನಿಧನದ ನಂತರ 1964ರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಕ್ಕಳನ್ನು ದೇಶದ ಭವಿಷ್ಯವೆಂದು ಪರಿಗಣಿಸಿದ ನೆಹರೂ ಅವರ ಆಶಯ ಇಂದಿಗೂ ಪ್ರಸ್ತುತವಾಗಿದೆ.

ಇಸ್ಲಾಮ್‌ ಕೂಡ ಮಕ್ಕಳನ್ನು ದೇವರು ನೀಡಿದ ಅಮೂಲ್ಯ ಕೊಡುಗೆಯೆಂದು ಪರಿಗಣಿಸುತ್ತದೆ. ಮಕ್ಕಳನ್ನು ಬೆಳೆಸುವುದು ಕೇವಲ ಕುಟುಂಬದ ಸಾಮಾಜಿಕ ಜವಾಬ್ದಾರಿಯಲ್ಲ; ಅದು ನೈತಿಕ ಹಾಗೂ ಧಾರ್ಮಿಕ ಹೊಣೆಗಾರಿಕೆಯೂ ಹೌದು. ಪವಿತ್ರ ಕುರ್‌ಆನ್‌ನ ಲುಕ್ಮಾನ್ ಅಧ್ಯಾಯದಲ್ಲಿ ಪ್ರವಾದಿ ಲುಕ್ಮಾನ್ ಅವರು ತಮ್ಮ ಮಗನಿಗೆ ನೀಡಿದ ಉಪದೇಶಗಳು ಮಕ್ಕಳ ತರಬೇತಿಗೆ ಅತ್ಯುತ್ತಮ ಮಾದರಿಯಾಗಿವೆ. ದೇವರಲ್ಲಿ ನಂಬಿಕೆ, ನಮಾಝ್, ಸತ್ಯನಿಷ್ಠೆ, ವಿನಯ, ತಾಳ್ಮೆ ಮತ್ತು ಮಾನವೀಯತೆ ಬೆಳೆಸುವ ಸಂದೇಶ ಅಲ್ಲಿ ಕಾಣುತ್ತದೆ.

ಪ್ರವಾದಿ ಮುಹಮ್ಮದ್(ಸ) ಅವರು ಮಕ್ಕಳೊಂದಿಗೆ ನಡೆದುಕೊಂಡ ರೀತಿ ಪಾಲಕರು ಮತ್ತು ಶಿಕ್ಷಕರಿಗೆ ಮಹತ್ವದ ಪಾಠವಾಗಿದೆ. ಮಕ್ಕಳನ್ನು ಪ್ರೀತಿಸುವುದು, ಅವರೊಂದಿಗೆ ಆಟವಾಡುವುದು, ತಪ್ಪು ಮಾಡಿದಾಗ ತಾಳ್ಮೆಯಿಂದ ತಿದ್ದುವುದು ಅವರ ಜೀವನದ ಮಾದರಿಯಾಗಿತ್ತು. ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಅವರೊಂದಿಗೆ ಅವರು ತೋರಿದ ಪ್ರೀತಿ, ಮಕ್ಕಳ ಭಾವನೆಗಳಿಗೆ ನೀಡಿದ ಗೌರವವನ್ನು ಪ್ರತಿಬಿಂಬಿಸುತ್ತದೆ. “ನಮ್ಮ ಚಿಕ್ಕವರ ಮೇಲೆ ಕರುಣೆ ತೋರದವನು ನಮ್ಮವರಲ್ಲ” ಎಂಬ ಪ್ರವಾದಿ ಸಂದೇಶವು ಮಕ್ಕಳ ಪಾಲನೆಯಲ್ಲಿ ಪ್ರೀತಿಯ ಮಹತ್ವವನ್ನು ಸಾರುತ್ತದೆ.

ಇಂದಿನ ಮಕ್ಕಳ ಬದುಕು ಹಿಂದೆಂದಿಗಿಂತಲೂ ಸಂಕೀರ್ಣವಾಗಿದೆ. ಮೊಬೈಲ್, ಸಾಮಾಜಿಕ ಜಾಲತಾಣ, ಸ್ಪರ್ಧಾತ್ಮಕ ಶಿಕ್ಷಣ ಮತ್ತು ಅತಿಯಾದ ನಿರೀಕ್ಷೆಗಳು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಮಕ್ಕಳು ತಪ್ಪು ದಾರಿಯಲ್ಲಿ ಸಾಗದಂತೆ ತಡೆಯುವುದು ಮುಖ್ಯವಾದರೂ, ಭಯ ಮತ್ತು ಶಿಕ್ಷೆಯ ಮೂಲಕ ಅವರನ್ನು ನಿಯಂತ್ರಿಸುವುದು ಶಾಶ್ವತ ಪರಿಹಾರವಲ್ಲ. ಪ್ರೀತಿ, ಸಂವಾದ ಮತ್ತು ಉತ್ತಮ ಮಾದರಿಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬೆಳೆಸಬೇಕು.

ಪಾಲಕರು ಮಕ್ಕಳಿಗೆ ಸಮಯ ನೀಡಬೇಕು. ಅವರ ಮಾತುಗಳನ್ನು ಆಲಿಸಬೇಕು. ಇತರ ಮಕ್ಕಳೊಂದಿಗೆ ಹೋಲಿಸಿ ಆತ್ಮವಿಶ್ವಾಸ ಕುಗ್ಗಿಸಬಾರದು. ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನೂ ನೀಡಬೇಕು. ಪ್ರಾರ್ಥನೆ, ಸತ್ಯ, ಪ್ರಾಮಾಣಿಕತೆ ಮತ್ತು ಹಿರಿಯರ ಗೌರವವನ್ನು ಕೇವಲ ಬೋಧಿಸುವುದಕ್ಕಿಂತ ಪಾಲಕರು ತಮ್ಮ ನಡವಳಿಕೆಯಲ್ಲಿ ತೋರಬೇಕು.

ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರಶ್ನಿಸುವ ಮತ್ತು ಸ್ವತಂತ್ರವಾಗಿ ಆಲೋಚಿಸುವ ಅವಕಾಶ ನೀಡಬೇಕು. ಮಕ್ಕಳ ಹಕ್ಕುಗಳಾದ ಶಿಕ್ಷಣ, ಸುರಕ್ಷತೆ, ಗೌರವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕಾಪಾಡಬೇಕು.

ಮಕ್ಕಳ ದಿನಾಚರಣೆ ಕೇವಲ ಸಿಹಿ ಹಂಚಿಕೆ ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವ ಸಂಕಲ್ಪವಾಗಬೇಕು. ಮಕ್ಕಳಿಗೆ ನಾವು ನೀಡಬಹುದಾದ ಅತ್ಯುತ್ತಮ ಉಡುಗೊರೆ ಪ್ರೀತಿ, ನಂಬಿಕೆ, ಉತ್ತಮ ಸಂಸ್ಕಾರ ಮತ್ತು ಸುರಕ್ಷಿತ ವಾತಾವರಣ. ಮಕ್ಕಳ ಮನಸ್ಸನ್ನು ಅರಿತು, ಅವರ ಕನಸುಗಳಿಗೆ ದಾರಿ ಮಾಡಿಕೊಡುವುದೇ ನಿಜವಾದ ಮಕ್ಕಳ ದಿನಾಚರಣೆ.