ಭಾರತದ ರಾಷ್ಟ್ರಧ್ವಜವನ್ನು ಎದೆಗಪ್ಪಿಕೊಂಡು 13,000 ಅಡಿ ಎತ್ತರದಿಂದ ಜಿಗಿದ ಕುಕ್ಕಿಲ- ಕಂಪದಬೈಲ್ ನ ಯುವಕ ಸಫ್ವಾನ್: ಊರವರಲ್ಲಿ ಮಿಂಚು- ವೀಡಿಯೊ

0
972

ಸನ್ಮಾರ್ಗ ವಾರ್ತೆ-

ವಿಟ್ಲ: ಸೆ. 11- ಇಲ್ಲಿನ ಕೆಲಿಂಜ ಮತ್ತು ಕುಕ್ಕಿಲದ ನಡುವೆ ಇರುವ ಕಂಪದಬೈಲ್ ಎಂಬಲ್ಲಿಯ ಯುವಕ ಸಫ್ವಾನ್ ದುಬೈಯ ಪಾಮ್ ಜುಮೈರಾ ಡ್ರೋಪ್ ಝೋನ್ ನಲ್ಲಿ 13,000 ಅಡಿ ಎತ್ತರದಿಂದ ವಿಮಾನದ ಹೊರಗೆ ಹಾರುವ ಮೂಲಕ ಸಾಹಸ ಪ್ರದರ್ಶಿಸಿದ ಅಪೂರ್ವ ಸಾಹಸ ಮೆರೆದಿದ್ದಾರೆ. ಸೆ. ೭ ರಂದು ಈ ಸಾಹಸಕ್ಕೆ ಜಗತ್ತು ಸಾಕ್ಷಿಯಾಗಿದೆ. ಈ ಬಗ್ಗೆ ಕೆಲಿಂಜ ಮತ್ತು ಕಂಪದಬೈಲ್ ನಲ್ಲಿ ಹೆಮ್ಮೆಯ ಮಾತುಗಳು ಕೇಳಿಬಂದಿವೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಬಗ್ಗೆ ಈ ಹಿಂದೆಯೇ ಬಹಳ ಅಭಿಮಾನವನ್ನು ಹೊಂದಿದ್ದ ಸಫ್ವಾನ್, ಈ ಸಾಹಸಕ್ಕೆ ತಯಾರಿ ನಡೆಸುವ ಸಂದರ್ಭದಲ್ಲೂ ಸಾಹಸ ಮೆರೆದ ಬಳಿಕವೂ ಅಣ್ಣಾಮಲೈ ಅವರನ್ನು ಸ್ಮರಿಸಿದ್ದಾರೆ ಮತ್ತು ಕೈಯಲ್ಲಿ ಐ ಲವ್ ಇಂಡಿಯಾ ಬರೆದು ಮತ್ತು ಎದೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡು ದೇಶಪ್ರೇಮವನ್ನು ಮೆರೆದಿದ್ದಾರೆ.

ಸಫ್ವಾನ್ ಅವರು ಬಹರೈನ್ ನಲ್ಲಿ ಉದ್ಯೋಗಿ. ಸಾಹಸ ಪ್ರದರ್ಶನ ಇವರ ಹವ್ಯಾಸ. ಬಹರೈನ್ ನ ಕಡಲಲ್ಲಿ ಬೋಟ್ ಗಳಲ್ಲಿ ಹಲವಾರು ಸಾಹಸ ಪ್ರದರ್ಶನ ಮಾಡಿರುವ ಇವರು ಸ್ವಾತಂತ್ರ್ಯ ದಿನ ಭಾರತದ ತ್ರಿವರ್ಣ ಧ್ವಜ ಹಿಡಿದು ಡೈವ್ ಬೋಟ್ ಪ್ರದರ್ಶನ ಮಾಡಿದ್ರು ಮತ್ತು ಆ ವೀಡಿಯೊ ವ್ಯಾಪಕ ಪ್ರಶಂಸೆ ಗಿಟ್ಟಿಸಿತ್ತು. ಪ್ರಸ್ತುತ ಜಗತ್ತಿನ ಅತಿ ದೊಡ್ಡ ದುಬೈಯ “ಸ್ಕೈ ಡೈವ್” ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಈ ಸ್ಕೈ ಡೈವ್ ಗಾಗಿ ಅವರು ಬಹರೈನ್ ನಿಂದ ದುಬೈಗೆ ತೆರಳಿದ್ದು, ಜಗತ್ಪ್ರಸಿದ್ಧ ಈ ದುಬೈ ಸ್ಕೈ ಡೈವ್ ದುಬೈಯಿಂದ 35 ಕಿ.ಮೀ. ದೂರದ ಪಾಮ್ ಜುಮೈರಾದಲ್ಲಿದೆ. ಈ ಸ್ಕೈ ಡೈವ್ ಸುಮಾರು ಎರಡು ತಾಸುಗಳ ಪ್ರಕ್ರಿಯೆಯಾಗಿದ್ದು, 20 ರಿಂದ 25 ನಿಮಿಷಗಳ ಕಾಲ ಸಫ್ವಾನ್ ಆಕಾಶದಲ್ಲಿ ತೇಲಾಡಿದ್ದಾರೆ.

ಸ್ಕೈ ಡೈವ್ ಮಾಡುವಾಗ ಪ್ರಾರಂಭದಲ್ಲಿ ಜಗತ್ತು ಮಸುಕಾಗಿ ಕಂಡಿತು. ನಂತರ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ತುದಿ ಗೋಚರಿಸಿತು. ಕ್ರಮೇಣ ಖರ್ಜೂರ ಮರ ಆಕಾರದ ಪಾಮ್ ಜುಮೈರಾ ಕಟ್ಟಡಗಳು, ಸಮುದ್ರ ಕಂಡವು ಎಂದು ಸಫ್ವಾನ್ ತನ್ನ ಸಾಹಸಮಯ ಪ್ರದರ್ಶನವನ್ನು ಬಣ್ಣಿಸಿದ್ದಾರೆ.

25 ನಿಮಿಷದ ದುಬೈ ಸ್ಕೈಡೈವ್ ಗೆ 50,000 ರೂ. ವೆಚ್ಚ ತಗುಲುತ್ತದೆ ಎಂದು ಹೇಳಲಾಗಿದೆ. ಜಗತ್ತಿನ ವಿವಿಧ ಭಾಗಗಳಿಂದ ಸಾಹಸ ಪ್ರದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. 13,000ದಷ್ಟು ಅಡಿ ಎತ್ತರಕ್ಕೆ ವಿಮಾನದಲ್ಲಿ ತೆರಳಿ ಅಲ್ಲಿಂದ ಪ್ಯಾರಾಚೂಟ್ ಮೂಲಕ ಕೆಳಗೆ ಹಾರುವುದೇ ಈ ಸ್ಕೈಡೈವ್. ಸಫ್ವಾನ್ ತನ್ನ ಮುಂದಿನ ಸಾಹಸವನ್ನು ಯೂರೋಪ್ ರಾಷ್ಟ್ರದಲ್ಲಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಸಫ್ವಾನ್ ಅವರು ಕಂಪದಬೈಲ್ ನ ದಿವಂಗತ ಸುಲೈಮಾನ್ ಅವರ ಮೂವರು ಮಕ್ಕಳಲ್ಲಿ ಕೊನೆಯವರು. ಕೊಡಪಾದವಿನ ಸರಕಾರೀ ಪ್ರಾಥಮಿಕ ಶಾಲೆಯಲ್ಲಿ ಕಲಿತು ಆ ಬಳಿಕ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದವರು. ಊರಿನಳಲ್ಲಿ ಸಾಮಾನ್ಯನಂತಿದ್ದ ಈ ಯುವಕನ ಸಾಧನೆಯನ್ನು ಕಂಡು ಊರವರು ಅಚ್ಚರಿಗೊಳಗಾಗಿದ್ದಾರೆ.