ಆಝಂ ಖಾನ್‌ಗೆ ಬಿಗ್ ರಿಲೀಫ್, ಮಧ್ಯಂತರ ಜಾಮೀನು ಅರ್ಜಿ ಮಂಜೂರು, ಜೈಲಿನಿಂದ ಹೊರಬರುವ ಹಾದಿ ಸುಗಮ

0
5

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರ ಶಿಕ್ಷೆಗೆ ತಡೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದರಿಂದಾಗಿ ಆಝಂ ಖಾನ್ ಜೈಲಿನಿಂದ ಹೊರಬರುವ ಹಾದಿ ಸುಗಮವಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಈ ಪ್ರಕರಣವು ಜನವರಿ 3, 2019 ರದ್ದಾಗಿದ್ದು, ಆಝಂ ಖಾನ್ ಮತ್ತು ಅವರ ಪತ್ನಿ ತಮ್ಮ ಪುತ್ರ ಅಬ್ದುಲ್ಲಾ ಆಝಂ ಖಾನ್‌ರಿಗೆ ಎರಡು ಜನನ ಪ್ರಮಾಣಪತ್ರಗಳನ್ನು ಮಾಡಿಸಿದ್ದಾರೆ ಎಂದು ಆರೋಪಿಸಿ ಆಕಾಶ್ ಸಕ್ಸೇನಾ ಎಂಬವರು ದೂರು ದಾಖಲಿಸಿದ್ದರು. ಸಕ್ಸೇನಾ ರಾಂಪುರದ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ.

ಆಝಂ ಖಾನ್ ಮತ್ತು ಅವರ ಪತ್ನಿ ಪುತ್ರನ ವಿರುದ್ಧ ರಾಂಪುರದ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ), 467 (ಬೆಲೆಬಾಳುವ ಭದ್ರತೆಯ ನಕಲಿ), 468 (ವಂಚನೆಯ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), 472 (ನಕಲಿ ಮಾಡುವ ಉದ್ದೇಶದಿಂದ ನಕಲಿ ಮುದ್ರೆ ಇತ್ಯಾದಿಗಳನ್ನು ತಯಾರಿಸುವುದು ಅಥವಾ ಇಟ್ಟುಕೊಳ್ಳುವುದು) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಮೂವರನ್ನೂ ದೋಷಿಗಳೆಂದು ಘೋಷಿಸಿ, ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಪಕ್ಷದ ಹಿರಿಯ ನಾಯಕ ಆಝಂ ಖಾನ್ ಅವರ ಶಿಕ್ಷೆಗೆ ತಡೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸ್ವಾಗತಿಸಿದ್ದಾರೆ. ಆಝಂ ಖಾನ್ ಅವರಿಗೆ ಶೀಘ್ರದಲ್ಲೇ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ. “ನ್ಯಾಯಾಲಯಗಳ ಮೂಲಕ ಅವರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಮುಂಬರುವ ದಿನಗಳಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ರಚನೆಯಾದಾಗ ನ್ಯಾಯವನ್ನು ಖಚಿತಪಡಿಸಲಾಗುವುದು” ಎಂದು ಮಾಜಿ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.