ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ: ತಿರುಪರಕುಂಡ್ರಮ್ ತೀರ್ಪಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ತಮಿಳುನಾಡು

0
47

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ತಿರುಪರಕುಂಡ್ರಮ್ ಬೆಟ್ಟದ ಮೇಲಿನ ದೀಪತ್ತೂನ್ (ದೀಪಸ್ತಂಭ) ಬಳಿ ದೀಪ ಹಚ್ಚಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ತಡೆ ಕೋರಿ ಅರ್ಜಿ ಸಲ್ಲಿಸಿದೆ.

ಹೈಕೋರ್ಟಿನ ಈ ಆದೇಶವನ್ನು ಜಾರಿಗೆ ತಂದರೆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದು ಹಾಗೂ ಮತೀಯ ಸೌಹಾರ್ದವು ಹದಗೆಡಬಹುದು ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಮಧುರೈಯ ತಿರುಪ್ಪರಂಕುಂಡ್ರಮ್ ಬೆಟ್ಟದಲ್ಲಿರುವ ದರ್ಗಾದ ಸಮೀಪದ ದೀಪಸ್ತಂಭದಲ್ಲಿ ದೀಪ ಹಚ್ಚುವ ಕುರಿತು ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಯಾಗಿತ್ತು. ಬೆಟ್ಟದ ವಿವಾದಿತ ಪ್ರದೇಶದಲ್ಲಿ ಹಿಂದಿನಿಂದಲೂ ಯಾವುದೇ ದೀಪ ಹಚ್ಚುವ ಸಂಪ್ರದಾಯವಿರಲಿಲ್ಲವೆಂದೂ, ಅಲ್ಲಿ ಸಿಕಂದರ್ ಬಾದ್‌ಷಾ ದರ್ಗಾ ಇರುವ ಕಾರಣ ಹೊಸ ಆಚರಣೆಗಳನ್ನು ತರುವುದು ಬಿಕ್ಕಟ್ಟಿಗೆ ದಾರಿ ಮಾಡಿಕೊಡಬಹುದು ಎಂಬುದು ಸರ್ಕಾರದ ವಾದವಾಗಿದೆ.

ಇದೇ ವೇಳೆ ದೀಪಸ್ತಂಭದಲ್ಲಿ ದೀಪ ಹಚ್ಚುವುದು ಈಗ ಅಸ್ತಿತ್ವದಲ್ಲಿರುವ ಆಚಾರದ ಭಾಗವಾಗಿದೆ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದು ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತು.

ಸುಪ್ರೀಂಕೋರ್ಟು ಹೈಕೋರ್ಟಿನ ಆದೇಶಕ್ಕೆ ತಡೆಯಾಜ್ಞೆ ಹೊರಡಿಸಿಲ್ಲ. ಜಸ್ಟಿಸ್ ಅರವಿಂದ ಕುಮಾರ್ ಮತ್ತು ವಿಪುಲ್ ಎಂ ಪಂಚೋಳಿಯವರನ್ನೊಳಗೊಂಡ ಸುಪ್ರೀಂ ಕೋರ್ಟಿನ ಪೀಠ ವಾದವನ್ನು ಆಲಿಸಿದೆ. ನವೆಂಬರ್ 24ಕ್ಕೆ ಕಾರ್ತಿಕ ದೀಪ ನಡೆಯಲಿದ್ದು ಸುಪ್ರೀಂಕೋರ್ಟಿನ ತೀರ್ಪು ವಿವಾದದಲ್ಲಿ ನಿರ್ಣಾಯಕವಾಗಲಿದೆ.