ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಸ್ಥಾಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

0
647

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸಬೇಕೆಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟು ನೋಟಿಸು ಜಾರಿಗೊಳಿಸಿದೆ. ರಾಷ್ಟ್ರೀಯ ಸುರಕ್ಷೆಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೋರ್ಟು ತಿಳಿಸಿತು. ಕಾಶ್ಮೀರ್ ಟೈಮ್ಸ್ ಸಂಪಾದಕಿ ಅನುರಾಧ ಬಾಸಿನ್‍ರ ಅರ್ಜಿಯಲ್ಲಿ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಪೀಠ ಆದೇಶ ನೀಡಿದೆ.

ರಾಜ್ಯದ ವಿಶೇಷಾಧಿಕಾರ ಆರ್ಟಿಕಲ್ 370 ತೆರವುಗೊಳಿಸಿದ್ದರ ಅಂಗವಾಗಿ ಹೇರಲಾದ ನಿಯಂತ್ರಣಗಳಂತೆ ಸಂವಹನ ವ್ಯವಸ್ಥೆಯನ್ನು ನಿಶ್ಚಲಗೊಳಿಸಲಾಗಿದ್ದು ಪತ್ರಿಕೆ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಅನುರಾಧ ಬಾಸಿನ್ ಅರ್ಜಿಯಲ್ಲಿ ತಿಳಿಸಿದ್ದರು. ನಿಯಂತ್ರಣಗಳು ಒಂದು ತಿಂಗಳಿನಿಂದ ಮುಂದುವರಿಯುತ್ತಿದ್ದು ಈಗಲೂ ಕಷ್ಟ ಎದುರಾಗುತ್ತಿದೆ ಎಂದು ಅರ್ಜಿಯಲ್ಲಿ ಅವರು ವಿವರಿಸಿದ್ದಾರೆ.

ಅರ್ಜಿಯನ್ನು ವಿರೋಧಿಸಿದ ಕೇಂದ್ರ ಸರಕಾರವು, ನಿಯಂತ್ರಣ ಹೇರಿದ ಬಳಿಕ ಯಾವುದೇ ಗುಂಡು ಹಾರಾಟ ರಾಜ್ಯದಲ್ಲಿ ನಡೆದಿಲ್ಲ ಎಂದು ಕೋರ್ಟಿಗೆ ತಿಳಿಸಿತು. ಪತ್ರಕರ್ತರಿಗೆ ಪಾಸುಗಳನ್ನು ನೀಡಲಾಗಿದ್ದು, ಎಲ್ಲ ಕಡೆ ಸಂಚರಿಸಬಹುದಾಗಿದೆ. ಫೋನ್, ಇಂಟರ್‌ನೆಟ್ ಸೌಲಭ್ಯ ನೀಡಲಾಗಿದೆ ಎಂದು ಅಟಾರ್ನಿ ಜನರಲ್ ಕೆ. ವೇಣುಗೋಪಾಲ್ ವಾದಿಸಿದರು. ಆದರೆ ವಾದವನ್ನು ಆಲಿಸಿದ ಕೋರ್ಟು ಕೇಂದ್ರ-ರಾಜ್ಯ ಸರಕಾರಗಳಿಗೆ ನೋಟಿಸು ಕಳುಹಿಸಿತು. ನಿಯಂತ್ರಣ ತೆರವು ಮತ್ತು ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸಿದ್ದರ ವಿವರಗಳನ್ನು ನೀಡುವಂತೆ ಸೂಚಿಸಿತು.