ಸನ್ಮಾರ್ಗ ವಾರ್ತೆ-
ಜಿನೀವಾ: ಸೆ. 24- 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ಕ್ರಮವನ್ನು ಯುರೋಪಿಯನ್ ಪಾರ್ಲಿಮೆಂಟ್ನ ಹಲವಾರು ಸದಸ್ಯರು ಮತ್ತು ಭಾರತೀಯ ಮುಸ್ಲಿಂ ಧರ್ಮಗುರುಗಳು ಭಾನುವಾರ ಬೆಂಬಲಿಸಿದ್ದಾರೆ. ಯುರೋಪಿಯನ್ ಪಾರ್ಲಿಮೆಂಟ್ ಸಂಸದರು (ಎಂಇಪಿ) ಮತ್ತು ಮುಸ್ಲಿಂ ಧರ್ಮಗುರುಗಳು ಜಿನೀವಾ ಪ್ರೆಸ್ ಕ್ಲಬ್ನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆರ್ಟಿಕಲ್ 370 ವಿಧಿ ರದ್ದುಪಡಿಸಿರುವುದನ್ನು “ಭಾರತದ ಸಂಪೂರ್ಣ ಆಂತರಿಕ ವಿಷಯ” ಎಂದು ಕರೆದ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯೆ ಥಿಯೆರಿ ಮರಿಯಾನಿ ಈ ವಿಷಯದಲ್ಲಿ ಭಾರತವನ್ನು ಬೆಂಬಲಿಸಿದರು ಮತ್ತು ಈ ವಿಷಯವನ್ನು ಅಂತರರಾಷ್ಟ್ರೀಕರಿಸುವ ಪಾಕಿಸ್ತಾನದ ಪ್ರಯತ್ನವನ್ನು ತಿರಸ್ಕರಿಸಿದರು.
“ಇದು ಅಂತರರಾಷ್ಟ್ರೀಯ ಘಟನೆಯಲ್ಲ. ಇದು ಕೇವಲ ಸ್ಥಾನಮಾನದ ಬದಲಾವಣೆಯಾಗಿದೆ. ಕಾಶ್ಮೀರ ಭಾರತಕ್ಕೆ ಸೇರಿದೆ. ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಲು ಭಾರತ ನಿರ್ಧರಿಸಿದರೆ ಅದು ಭಾರತದ ಆಂತರಿಕ ವಿಷಯವಾಗಿದೆ. ಸ್ಥಿತಿ ಬದಲಾವಣೆಯು ಜಮ್ಮು ಕಾಶ್ಮೀರಕ್ಕೆ ಪ್ರಯೋಜನವನ್ನು ನೀಡುತ್ತದೆ” ಎಂದು ಅವರು ಇಲ್ಲಿ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಇಯು ಸದಸ್ಯ ಚಾರ್ಲ್ಸ್ ಟ್ಯಾನಾಕ್, ಸದಸ್ಯರುಗಳಾದ ಫುಲ್ವಿಯೊ ಮಾರ್ಟುಸಿಯೆಲ್ಲಾ ಮತ್ತು ಗೈಸೆಪೆ ಫೆರಾಂಡಿನೊ ಮತ್ತು ಕೆನಡಾದ ಸಂಸತ್ತಿನ ಮಾಜಿ ಸದಸ್ಯ ಮಾರಿಯೋ ಸಿಲ್ವಾ ಉಪಸ್ಥಿತರಿದ್ದರು.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ವಾದಿಸಿದ ಜಮಿಯತ್ ಉಲೆಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ, ಈ ವಿಷಯವನ್ನು ಅಂತರರಾಷ್ಟ್ರೀಕರಿಸಲು ಪಾಕಿಸ್ತಾನದ ಪ್ರಧಾನಮಂತ್ರಿಯವರು ನಡೆಸುತ್ತಿರುವ ಪ್ರಯತ್ನಗಳನ್ನು ತಿರಸ್ಕರಿಸಿದರು ಮತ್ತು ಪಾಕಿಸ್ತಾನಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಇಮ್ರಾನ್ ಗೆ ಕರೆಕೊಟ್ಟರು.
“ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ನಾವು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳ ಯಾವುದೇ ಹಸ್ತಕ್ಷೇಪವನ್ನು ಸ್ವೀಕರಿಸುವುದಿಲ್ಲ. ಭಾರತದ ಸಮಗ್ರತೆಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಪಾಕಿಸ್ತಾನದ ವಾದವನ್ನು ನಾವು ತಿರಸ್ಕರಿಸುತ್ತೇವೆ” ಎಂದು ಅವರು ಹೇಳಿದರು.
ಅಜ್ಮೀರ್ ದರ್ಗಾ ಷರೀಫ್ ನ ಉಸ್ತುವಾರಿಯಾಗಿರುವ ಸೈಯದ್ ಸಲ್ಮಾನ್ ಚಿಶ್ಟಿ ಅವರು ಜಮ್ಮು ಕಾಶ್ಮೀರ್ ಕುರಿತ ಪಾಕಿಸ್ತಾನದ ಪ್ರಚಾರವನ್ನು ತಿರಸ್ಕರಿಸಿದರು. “ಇದು ವಿಫಲ ಪ್ರಯತ್ನ. ಸತ್ಯ ತಿಳಿದಿರುವ ಜನರು ಈ ಅಪಪ್ರಚಾರಕ್ಕೆ ಗಮನ ಕೊಡುವುದಿಲ್ಲ” ಎಂದು ಅವರು ಹೇಳಿದರು.












