ಸನ್ಮಾರ್ಗ ವಾರ್ತೆ
ಅಹ್ಮದಾಬಾದ್,ಅ.2: “ನ್ಯಾಯಕ್ಕಾಗಿ ಕಳೆದ ಹದಿನೈದು ವರ್ಷ ಕಾದೆ. ಈಗ ನನ್ನಲ್ಲಿ ಯಾವುದೇ ನಿರೀಕ್ಷೆ ಉಳಿದಿಲ್ಲ. ಪ್ರಕರಣದಲ್ಲಿ ಆರೋಪಿಗಳಾದ ಪೊಲೀಸ್ ಅಧಿಕಾರಿಗಳ ಸಹಿತ ಎಲ್ಲರೂ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ನನ್ನ ಮಗಳನ್ನು ಕೊಂದದಕ್ಕಾಗಿ ವಿಚಾರಣೆ ಎದುರಿಸುತ್ತಿರುವ ಹಲವರನ್ನು ಗುಜರಾತ್ ಸರಕಾರ ಮರು ನೇಮಕ ಮಾಡಿಕೊಂಡಿದೆ. ವರ್ಷಗಳಿಂದ ವಿಚಾರಣೆ ಕೂಡ ಆರಂಭವಾಗಿಲ್ಲ. ನಾನು ಅಸಹಾಯಕಳು. ಇನ್ನು ಕೋರ್ಟಿಗೆ ಹೋಗುವುದಿಲ್ಲ” ಎಂದು ಗುಜರಾತ್ ಪೊಲೀಸ್ ಎನ್ಕೌಂಟರಿನಲ್ಲಿ ಕೊಲೆಯಾದ ಇಶ್ರತ್ ಜಹಾನ್ ತಾಯಿ ಶಮೀಮ ಕೌಸರ್ ಕಣ್ಣೀರು ಹರಿಸುತ್ತಾ ಹೇಳಿದ್ದಾರೆ.
ಸಿಬಿಐ ವಿಶೇಷ ಕೋರ್ಟು ಜಡ್ಜ್ ಆರ್.ಕೆ.ಚೌದಾವಾಲರಿಗೆ ಬರೆದ ಪತ್ರದಲ್ಲಿ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಪ್ರಕರಣದಲ್ಲಿ “ಇನ್ನೂ ಕಾನೂನು ಹೋರಾಟ ತನ್ನಿಂದ ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ. ಆರೋಪಿಗಳನ್ನು ಶಿಕ್ಷಿಸದಿರುವ ಈ ವ್ಯವಸ್ಥೆ ತನ್ನ ಹೃದಯವನ್ನು ಚಿಂದಿ ಮಾಡುತ್ತಿದೆ. ಹಲವು ವರ್ಷಗಳಿಂದ ಕೋರ್ಟಿಗೆ ಹೋಗಿ ಬಂದು ಮಾಡಿದೆ. ಇಶ್ರತ್ಳನ್ನು ಭಯೋತ್ಪಾದಕಿ ಎಂದು ಘೋಷಿಸಿದ್ದರ ಹಿಂದೆ ದೊಡ್ಡ ರಾಜಕೀಯ ಸಂಚಿದೆ ಎಂದು ವಕೀಲೆ ವೃಂದಾ ಗ್ರೋವರ್ರಿಗೆ ಶಮೀಮಾ ಹೇಳಿದ್ದಾರೆ.
ಹಲವು ವರ್ಷಗಳಿಂದ ಕೋರ್ಟು ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದೆ. ಗುಜರಾತಿನ ಪ್ರಮುಖ ಪೊಲೀಸಧಿಕಾರಿಗಳು ಶಿಕ್ಷಿಸಲು ತನ್ನ ಹೋರಾಟವಿತ್ತು. ಆದರೆ ಸರ್ವಿಸಿಗೆ ಮರಳಿದ ಇವರಿಗೆ ಸರಕಾರದ ಪೂರ್ಣ ಸಂರಕ್ಷಣೆಯಿದೆ. ಈ ಹೋರಾಟದಲ್ಲಿ ನಾನೊಬ್ಬಳೇ ಇರಲಿಲ್ಲ. ಆರೋಪಿಗಳು ಶಿಕ್ಷಿಸಬೇಕು ಎನ್ನುವುದನ್ನು ಇನ್ನು ಸಿಬಿಐ ದೃಢಪಡಿಸಬೇಕು ಎಂದು ಶಮೀಮಾ ಹೇಳಿದರು.
ಇಶ್ರತ್ ಜಹಾನ್ ಎನ್ಕೌಂಟರ್ ಆರೋಪದಿಂದ ತಮ್ಮನ್ನು ಬಿಡುಗಡೆಗೊಳಿಸಬೇಕೆಂದು ನಾಲ್ವರು ಪೊಲೀಸಧಿಕಾರಿಗಳು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಐಜಿ ಜಿಲ್ ಸಿಂಗಾಲ್, ಮಾಜಿ ಡಿಎಸ್ಪಿ ತರುಣ್ ಬರೋಟ್, ಮಾಜಿ ಡಿವೈಎಸ್ಪಿ ಜಿ.ಜಿ.ಪರ್ಮಾರ್, ಎಎಸ್ಐ ಅನಜು ಚೌಧರಿ ಇವರು ಸಲ್ಲಿಸಿದ ಅರ್ಜಿ ಕೋರ್ಟಿನ ಪರಿಗಣನೆಯಲ್ಲಿದೆ.












