ಈಜಿಪ್ಟಿನಲ್ಲಿ ಸರಕಾರಿ ದಮನ ನಡೆಯುತ್ತಿದೆ: ಅಮ್ನೆಸ್ಟಿ ಇಂಟರ್‌ ನ್ಯಾಷನಲ್

0
550

ಸನ್ಮಾರ್ಗ ವಾರ್ತೆ

ಕೈರೊ:ಈಜಿಪ್ಟ್‌ನಲ್ಲಿ ಸರಕಾರ ದಮನ ನೀತಿಯನ್ನು ಅನುಸರಿಸುತ್ತಿದೆ ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಹೇಳಿದೆ. ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‍ಸಿಸಿಯ ಅಧಿಕಾರಿಗಳು ಸೆಪ್ಟಂಬರ್‍‌ನಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ 2300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಹದಿನೇಳು ರಿಂದ ಹನ್ನೊಂದು ವರ್ಷ ವಯಸ್ಸಿನ 111 ಬಾಲಕರಿದ್ದಾರೆ. 69 ಮಂದಿಗೆ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಇದೆ ಎಂದು ಆರೋಪಿಸಲಾಗಿದೆ. ಶಾಂತಿಯುತವಾಗಿ ಪ್ರತಿಭಟಿಸಿದವರ ಬಂಧನ ಸತ್ರ ಒಂದೆಡೆ ನಡೆದರೆ, ಇನ್ನೊಂದೆಡೆ ಪತ್ರಕರ್ತರು, ರಾಜಕೀಯ ಕಾರ್ಯಕರ್ತರನ್ನು ಅನ್ಯಾಯವಾಗಿ ಸಿಸಿ ಸರಕಾರ ಬಂಧಿಸುತ್ತಿದೆ. ಬಂಧಿಸಲಾದವರ ಪರ ವಾದಿಸಿದ ವಕೀಲರನ್ನೂ ಸರಕಾರ ಬಂಧಿಸಿದೆ ಎಂದು ಆಮ್ನೆಸ್ಟಿ ತಿಳಿಸಿದೆ.

ಈ ಬಂಧನದ ಮೂಲಕ ಸಿಸಿಯ ವಿರುದ್ಧ ಸಣ್ಣ ಧ್ವನಿಯೂ ಏಳದಂತೆ ಮಾಡುವುದು ಉದ್ದೇಶವಾಗಿದೆ. ಸರಕಾರಿ ಟೀಕಾಕಾರರನ್ನು ಮಾತಾಡದಂತೆ ಮಾಡುವುದಕ್ಕೆ ಇದು ನಡೆಯುತ್ತಿದೆ ಎಂದು ಆಮ್ನೆಸ್ಟಿ ಉತ್ತರ ಆಫ್ರಿಕಾ ಪ್ರಚಾರ ನಿರ್ದೇಶಕ ನಾಜಿಯ ಬೊನಿಂ ಹೇಳಿದರು.

ಕಳೆದ ತಿಂಗಳು ಈಜಿಪ್ಟಿನಲ್ಲಿ ಪ್ರತಿಭಟನೆ ಶುರುವಾಗಿತ್ತು. ಬಿಸಿನೆಸ್ ಮ್ಯಾನ್ ಮುಹಮ್ಮದ್ ಅಲಿಯ ಕರೆಯಂತೆ ಜನರು ಬೀದಿಗಿಳಿದಿದ್ದರು. ಮುಹಮ್ಮದ್ ಅಲಿ ಕಟ್ಟಡ ನಿರ್ಮಾಣ ಕಂಪೆನಿಯನ್ನು ಹೊಂದಿದ್ದು ಸೈನ್ಯಕ್ಕಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ದೇಶದಲ್ಲಿ ಹಸಿವು ವ್ಯಾಪಿಸಿದರೂ ಸಿಸಿ ಮತ್ತು ಅವರ ಸಹಾಯಕರು ಕನಸಿನ ಯೋಜನೆಯ ಹೆಸರು ಹೇಳಿ ಲಕ್ಷಾಂತರ ಡಾಲರ್ ಭ್ರಷ್ಟಾಚಾರ ನಡೆಸಿದ್ದಾರೆ. ಇದನ್ನು ವಿರೋಧಿಸಿ ಈಜಿಪ್ಟಿನಲ್ಲಿ ಜನತಾ ಹೋರಾಟ ಮತ್ತೊಮ್ಮೆ ಗರಿಕೆದರಿದೆ.