ತಲಾಖ್ ಒಂದು ಸಮಸ್ಯೆಯೇ?

0
1315

ಝುಲೇಖ ಮುಮ್ತಾಝ್

ಕಳೆದ ಕೆಲವು ವರ್ಷಗಳಿಂದ ಮಾಧ್ಯಮದಲ್ಲೂ, ಪತ್ರಿಕೆಗಳಲ್ಲೂ, ಇಡೀ ಭಾರತ ದೇಶದಲ್ಲೂ ತುಂಬಾ ಚರ್ಚೆಗೆ ಒಳಪಟ್ಟ ವಿಷಯವಾಗಿದೆ ತಲಾಕ್. ತಲಾಕ್ ಅಂದ್ರೆ ಏನು? ತಲಾಕ್ ಅಂದ್ರೆ ವಿಚ್ಛೆದನೆ. ಮದುವೆ ಅಥವಾ ದಾಂಪತ್ಯ ಎಂಬ ಸಂಬಂಧದಿಂದ ಮುಕ್ತಿ ಹೊಂದುವುದೇ ತಲಾಕ್ ಆಗಿದೆ.

ಇಂಗ್ಲಿಷ್ ನಲ್ಲಿ ಒಂದು ಮಾತಿದೆ- “marriages are made in heaven ,celebrated in earth “ಅಂತ. ಅಂದ್ರೆ ಮದುವೆ ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತದೆ, ಭೂಮಿಯಲ್ಲಿ ಆಚರಿಸಲ್ಪಡುತ್ತದೆ ಎಂದು. ಇಸ್ಲಾಂನಲ್ಲಿ ವಿವಾಹಕ್ಕೆ ತುಂಬಾ ಮಹತ್ವ ಇದೆ. ವಿಭಿನ್ನ ಕುಟುಂಬದವರು ಪರಸ್ಪರ ಒಬ್ಬರೊನ್ನೊಬ್ಬರು ಅರಿತುಕೊಂಡು ಗಂಡು ಮತ್ತು ಹೆಣ್ಣನ್ನು ಗೊತ್ತುಪಡಿಸಿ ಅವರ ಅಭಿಪ್ರಾಯ ಒಪ್ಪಿಗೆ ಪಡೆದುಕೊಂಡು ಇಬ್ಬರ ಮನೆಯವರು ಮಾತುಕತೆ ನಡೆಸಿ ದಿನಾಂಕವನ್ನು ನಿಗದಿಪಡಿಸಿ ಕುಟುಂಬಸ್ತರ, ಗುರು ಹಿರಿಯರ, ಜಮಾತಿನವರ ಸಾಕ್ಷಿಯಾಗಿ ವರನು ವಧುವಿಗೆ ಕಡ್ಡಾಯ ಮಹರ್ ನ್ನು ಕೊಟ್ಟು ನಿಕಾಹ್ ಎಂಬ ಪವಿತ್ರ ಬಂಧನದಲ್ಲಿ ದಾಂಪತ್ಯವನ್ನು ಪ್ರಾರಂಭಿಸುವುದಾಗಿದೆ ಮದುವೆ ಅಥವಾ ವಿವಾಹ.

ಮದುವೆಗೆ ಇಸ್ಲಾಂ ಧರ್ಮದಲ್ಲಿ ಮಾತ್ರ ಅಲ್ಲ ಎಲ್ಲಾ ಧರ್ಮದಲ್ಲೂ ಬಹಳ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಗಂಡು ಹೆಣ್ಣಿಗೂ ಹೆತ್ತವರು ಮದುವೆ ಮಾಡಿಸುವುದು ಸಾಮಾನ್ಯವಾಗಿದೆ. ಇಂತಹ ವಿವಾಹ ಬಂಧನವನ್ನು ಬೇರ್ಪಡಿಸುವುದೇ ತಲಾಕ್ ಆಗಿದೆ. ಸಣ್ಣ ಸಣ್ಣ ವಿಷಯಗಳಿಗೆ ತಲಾಕ್ ನ ಪ್ರಸ್ತಾಪ ಮಾಡಬಾರದು.

ಅಲ್ಲಾಹನಿಗೆ ತುಂಬಾ ಅಪ್ರಿಯವಾದ ವಿಷಯವಾಗಿದೆ ತಲಾಕ್. ತಮಾಷೆಗಾಗಿಯೂ ನೀವು ತಲಾಕ್ ನ ವಿಷಯವನ್ನು ಪ್ರಸ್ತಾಪ ಮಾಡಬೇಡಿರೆಂದು ಪ್ರವಾದಿ ಹೇಳಿದ್ದಾರೆ. ಯಾವುದಾದರೂ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪಗಳು ಬಂದಲ್ಲಿ ಪತಿ ಪತ್ನಿಯರಿಬ್ಬರೂ ತಮ್ಮ ತಪ್ಪುಗಳನ್ನು ತಿದ್ದಿ ಒಬ್ಬರೊನ್ನೊಬ್ಬರು ಕ್ಷಮಿಸಿಬಿಡಿ. ಮನಸ್ತಾಪಗಳು ಹೆಚ್ಚು ಮುಂದುವರೆದರೆ ಎರಡು ಕುಟುಂಬದವರು ಪರಸ್ಪರ ರಾಜಿ ಪಂಚಾತಿಕೆ ಮಾಡಿ. ಪತಿ ಪತ್ನಿಯರ ನಡುವೆ ಇದು ಸಾಧ್ಯವಾಗದೆ ಹೊಂದಿಕೊಂಡು ಹೋಗುವ ಪ್ರಯತ್ನಗಳು ವಿಫಲವಾದಾಗ ಬುಧ್ಧಿವಾದ, ಸಮಾಲೋಚನೆ (counselling) ಮಾಡಿಯೂ ಸಂಬಂಧ ಸುದಾರಣೆಯಾಗದೆ ಇನ್ನು ಮುಂದೆ ದಾಂಪತ್ಯವನ್ನು ಮುಂದುವರೆಸಲು ಸಾಧ್ಯವಿಲ್ಲವೆಂದಾದರೆ ಮಾತ್ರ ಅಂತಹ ಪರಿಸ್ಥಿತಿಯಲ್ಲಿ ಗಂಡು ಹೆಣ್ಣಿಗೆ ತಲಾಕ್ ನೀಡುವುದಕ್ಕೆ ಅನುಮತಿ ನೀಡಲಾಗಿದೆ.

ತಲಾಕ್ ಗೆ ಅನುಮತಿ ಇದ್ದರೂ ಮನಸ್ಸು ಬಂದ ಹಾಗೆ ವಾಟ್ಸಪ್ ನಲ್ಲಿ, ಫೋನ್ ನಲ್ಲಿ, ತಲಾಕ್ ಎಂದು ಮೂರು ಸಲ ಹೇಳಿ ತಲಾಕ್ ನೀಡುವುದು ಇಸ್ಲಾಂನ ಕಾನೂನು ಪರಿಗಣಿಸುವುದಿಲ್ಲ ಮತ್ತು ಯಾವುದೇ ತಪ್ಪು ಮಾಡದ ನಿರ್ದೋಷಿ ಹೆಣ್ಣಿನ ಮೇಲೆ ಅಪವಾದ ಹೊರೆಸಿ ಇತರರ ಮಾತನ್ನು ಕೇಳಿ ತಲಾಕ್ ನೀಡುವುದಕ್ಕೂ ಇಸ್ಲಾಂ ಧರ್ಮ ಅನುಮತಿ ನೀಡುವುದಿಲ್ಲ. ಎಲ್ಲ ವಿಷಯಗಳಿಗೂ ನೀತಿ ನಿಯಮ ಇದ್ದ ಹಾಗೆ ತಲಾಕ್ ಗೂ ಕೆಲವು ನಿಯಮ ಬಂಧಗಳಿವೆ. ಅಲ್ಲಾಹನ ಪವಿತ್ರ ಗ್ರಂಥ ಕುರ್ ಆನಿನ 2ನೇ ಅಧ್ಯಾಯ ಸೂರ ಅಲ್ ಬಕರದ 225ರ 237ರ ವರೆಗಿನ ಸೂಕ್ತದಲ್ಲಿ ಮತ್ತು 65ನೇ ಅಧ್ಯಾಯ ಅತ್ತಲಾಕ್ನ ಒಂದರಿಂದ ಏಳನೆಯವರೆಗಿನ ಸೂಕ್ತಗಳಲ್ಲಿಯೂ ತಲಾಕ್ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಸಮುದಾಯದಲ್ಲಿ ತಲಾಕ್ ನ ವಿಷಯ ಹೆಚ್ಚಾಗಿ ಕೇಳಿ ಬರುತ್ತಿರಲಿಲ್ಲ. ಆದರೆ ಈಗ ಮದುವೆಯಾಗಿ ಒಂದೆರೆಡು ತಿಂಗಳು ಅಥವಾ ವರ್ಷದೊಳಗೆ ಪರಸ್ಪರ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೆ ತಪ್ಪು ತಿಳುವಳಿಕೆಯ ಕಾರಣ ಅನೇಕ ಕುಟುಂಬಗಳಲ್ಲಿ ದಾಂಪತ್ಯ ಜೀವನವು ತಲಾಕ್ ನವರೆಗೆ ತಲುಪಿ ಸಂಬಂಧಗಳು ಮುರಿದು ಬೀಳುತ್ತವೆ.

ಕುರ್ ಆನ್ ನಲ್ಲಿ ಈ ರೀತಿ ವಿವರಿಸಲಾಗಿದೆ. ತಲಾಕ್ ನೀಡುವುದೇ ಗಂಡಿನ ಕಡೆಯ ನಿರ್ಧಾರವಾದರೆ ಹೆಣ್ಣಿಗೆ ಮೂರು ತಿಂಗಳು ಕಾಲವಕಾಶ ನೀಡಲಾಗಿದೆ.(3 ಆರ್ತವದ ವರೆಗೆ) ಪ್ರಥಮ ತಲಾಕ್ ನ ನಂತರ ಆಕೆ ಪತಿಯ ಮನೆಯಲ್ಲಿರಬೇಕು. ಒಟ್ಟಿಗೆ ಒಂದೇ ಮನೆಯಲ್ಲಿರುದರಿಂದ ಒಬ್ಬರನ್ನೊಬ್ಬರು ಕ್ಷಮಿಸಿ ಇಬ್ಬರ ಮಧ್ಯೆ ರಾಜಿಯಾಗುವ ಸಾಧ್ಯತೆಗಳಿರುದರಿಂದ ತಲಾಕನ್ನು ತಡೆಯಬಹುದಾಗಿದೆ. ಮೊದಲ ತಲಾಕ್ ನ ನಂತರ ಪುನ: ದಾಂಪತ್ಯ ಮುಂದುವರೆಸಬಹುದು. ಅಂದರೆ ಮೊದಲನೆ ಋತು ಸ್ರಾವದ ಬಳಿಕ ಒಂದನೇ, ನಂತರ ಎರಡು ಮತ್ತು ಮೂರನೇ ಹೀಗೆ 3 ತಿಂಗಳ ಋತುಬಂಧದ ನಂತರ ಶುಧ್ಧಿಕಾಲದಲ್ಲಿ (ಇದ್ದತ್) ಮೂರನೇ ಸಲ ತಲಾಕ್ ನೀಡುವುದಾಗಿದೆ ಕ್ರಮ. ಈ ಮೂರು ತಿಂಗಳು ಹೆಣ್ಣು ಗಂಡನ ಮನೆಯಲ್ಲಿದ್ದುಕೊಂಡು ಆಕೆಯ ಖರ್ಚು ಮತ್ತು ಮಕ್ಕಳ್ಳಿದ್ದರೆ ಮಕ್ಕಳ ಖರ್ಚು, ಮತ್ತು ಗರ್ಭಿಣಿಯಾಗಿದ್ದರೆ ಅವರ ಪ್ರಸವ ತನಕ ಖರ್ಚನ್ನು ಪತಿಯಾದವನು ವಹಿಸಿಕೊಳ್ಳ ಬೇಕು. ಮನೆಯವರು ಹೆಣ್ಣಿನ ಮನಸ್ಸಿಗೆ ನೋವಾಗದ ಹಾಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು. ಈ ಮೂರು ತಿಂಗಳ ಅವಧಿಯಲ್ಲಿ ಕೂಡ ಇಬ್ಬರ ಮಧ್ಯೆ ಯಾವೊಂದು ಬದಲಾವಣೆ ಆಗದೆ ರಾಜಿ ಒಪ್ಪಂದ ಆಗದಿದ್ದರೆ ನಂತರ ಎರಡು ಸಾಕ್ಷಿದಾದರರ ಉಪಸ್ತಿತಿಯಲ್ಲಿ ಸಂತೋಷದಿಂದ ಅವರಿಗೆ ಕೊಟ್ಟ ಮಹ್ರ್ ನ ಆಭರಣ, ಬಟ್ಟೆಬರೆಗಳನ್ನು ಹಿಂದಕ್ಕೆ ಪಡೆಯದೆ ತಲಾಕ್ ನೀಡಬೇಕು. ಈ ರೀತಿ ಮೂರು ಮಾಸಿಕ ಸ್ರಾವಗಳ ಅವಧಿಯ ನಂತರ ತಲಾಕ್ ನೀಡಿದ ಮೇಲೆ ನಂತರ ಅವರು ದಾಂಪತ್ಯ ಜೀವನ ಮುಂದುವರಿಸುವಂತಿಲ್ಲ ಮತ್ತು ಗರ್ಭಿಣಿ ಸ್ತ್ರೀಯರ ಇದ್ದತಿನ ಅವಧಿಯು ಅವರ ಹೆರಿಗೆಯ ತನಕ ಇದೆ. ಮೇಲೆ ತಿಳಿಸಲಾದ ಮೂರು ತಲಾಕನ್ನು ಒಂದೇ ಸಲ ಹೇಳುವುದನ್ನು ತ್ರಿವಳಿ ತಲಾಕ್ ಎಂದು ಹೇಳುತ್ತಾರೆ. ಈ ನೀತಿಯನ್ನು ಇಸ್ಲಾಂ ಪರಿಗಣಿಸುವುದಿಲ್ಲ.

ಇಸ್ಲಾಂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದೆ.ಪುರುಷರಿಗೆ ತಲಾಕ್ ನೀಡುವ ಹಕ್ಕು ನೀಡಿರುವ ಹಾಗೆ ಮಹಿಳೆಯರಿಗೂ ಖುಲಾ, ಫಸ್ಕ್ ಎಂಬ ಹಕ್ಕನ್ನು ನೀಡಲಾಗಿದೆ. ತಲಾಕ್ ನ ನಂತರ ಹೆಣ್ಣಿಗೆ 3 ತಿಂಗಳು ಇದ್ದತ್ ಇದೆ. ನಂತರ ಆಕೆ ಬೇರೆಯವರೊಂದಿಗೆ ವಿವಾಹ ಆಗಬಹುದು. ಒಮ್ಮೆ ತಲಾಕ್ ಆದ ನಂತರ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿ ಮೊದಲಿನ ವಿವಾಹದಲ್ಲಿ ದಾಂಪತ್ಯವನ್ನು ಮುಂದುವರೆಸಬೇಕಾದರೆ ಕೆಲವು ಷರತ್ತುಗಳನ್ನು ಪಾಲಿಸಬೇಕಾಗಿದೆ ಆ ಮಹಿಳೆಗೆ ಇನ್ನೊಂದು ಪುರುಷನ ಜೊತೆ ವಿವಾಹವಾಗಿ ಆ ಪತಿಯು ತಲಾಕ್ ನೀಡಿದ ನಂತರವೇ ಮೊದಲ ವಿವಾಹದ ದಾಂಪತ್ಯವನ್ನು ಮುಂದುವರೆಸಬಹುದು.

ಈ ಜಗತ್ತಿನಲ್ಲಿ ಮಾನವರನ್ನು ಸೃಷ್ಟಿಸಿದ ಸೃಷ್ಟಿಕರ್ತ ಪ್ರತಿಯೊಂದು ಗಂಡಿಗೂ ಹೆಣ್ಣಿಗೂ ಕೆಲವು ಜವಾಬ್ದಾರಿಯನ್ನು ಕೊಟ್ಟಿದ್ದಾನೆ. ಪುರುಷರು ಸ್ರೀಯರ ಮೇಲೆ ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಟತೆ ಪ್ರದಾನ ಮಾಡಿರುವುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ(ಅನ್ನಿಸಾ: 34). ಆತನಿಗೆ ಕುಟುಂಬದ ಹಲವು ಜವಾಬ್ದಾರಿಗಳಿವೆ. ಕುಟುಂಬದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರ ನಡುವೆ ಹೊಂದಾಣಿಕೆ ಮುಖ್ಯವಾಗಿದೆ. ಇಬ್ಬರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಒಬ್ಬರೊನ್ನೊಬ್ಬರು ಅರಿತುಕೊಂಡು ಜೀವನ ನಡೆಸಿದರೆ ಮುಂದೆ ಯಾವುದೇ ಸಂಕಷ್ಟಗಳು ಬರಲು ಸಾಧ್ಯವಿಲ್ಲ.