ಮಲೇಷ್ಯಾದಲ್ಲಿ ಶೇ. 40 ಕ್ಕಿಂತ ಹೆಚ್ಚು ಹೂಡಿಕೆದಾರರು ಮತ್ತು ಶೇ.60 ಸಾಲಗಾರರು ಮುಸ್ಲಿಮೇತರರು; ಕೀನ್ಯಾದಲ್ಲೂ ಇದೇ ಸ್ಥಿತಿ: ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ ಇಸ್ಲಾಮಿಕ್ ಬ್ಯಾಂಕ್ ಕಾರ್ಯಾಚರಿಸುತ್ತಿರುವಾಗ ಭಾರತವೇಕೆ ನಿರಾಕರಿಸುತ್ತಿದೆ? ಹೆಸರೇ ಸಮಸ್ಯೆಯೇ?

0
778
ಮಲೇಷ್ಯಾದ ಇಸ್ಲಾಮಿಕ್ ಬ್ಯಾಂಕ್

ಸನ್ಮಾರ್ಗ ವಾರ್ತೆ-

ಅಶ್ವಿನಿ ಶ್ರೀವಾಸ್ತವ

ಸಿಂಗಾಪುರ, ಅಕ್ಟೋಬರ್ 31 (ಪಿಟಿಐ): ಭಾರತೀಯ ಮತ್ತು ವಿದೇಶಿ ಬ್ಯಾಂಕುಗಳು ಇಸ್ಲಾಮಿಕ್ ಬ್ಯಾಂಕಿಂಗ್‌ನ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ಲಾಮಿಕ್ ಬ್ಯಾಂಕಿಂಗ್ ಎನ್ನುವುದು ಬಡ್ಡಿ ರಹಿತ ತತ್ವಗಳ ಆಧಾರದ ಮೇಲೆ ನಿಂತಿರುವ ಹಣಕಾಸು ವ್ಯವಸ್ಥೆಯಾಗಿದ್ದು, ಬಡ್ಡಿಯನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ.

“ಇಸ್ಲಾಮಿಕ್ ಹಣಕಾಸು ಕ್ಷೇತ್ರವು ಗಾತ್ರ ಮತ್ತು ಸಂಕೀರ್ಣತೆಯಲ್ಲಿ ವಿಕಸನಗೊಳ್ಳುತ್ತಲೇ ಇದೆ ಎಂದು ಸಂಶೋಧನೆ ತೋರಿಸುತ್ತವೆ. ಇಸ್ಲಾಮಿಕ್ ಬ್ಯಾಂಕಿಂಗ್ ಸೇವೆಯನ್ನು ವಿಶ್ವದಾದ್ಯಂತ 60 ಕ್ಕೂ ಹೆಚ್ಚು ದೇಶಗಳಲ್ಲಿ ನೀಡಲಾಗುತ್ತದೆ. ಭಾರತೀಯ ಮತ್ತು ವಿದೇಶಿ ಬ್ಯಾಂಕುಗಳು ಭಾರತದಲ್ಲಿ ಈ ದಿಸೆಯಲ್ಲಿ ಮುಂದುವರಿದರೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಇದು ಒಂದು ಉತ್ತಮ ಅವಕಾಶವಾಗಿದೆ ಎಂದು ಇಸ್ಲಾಮಿಕ್ ಬಾಂಕಿಂಗ್ ತಜ್ಞ ಹಾಝಿಕ್ ಮುಹಮ್ಮದ್ ಹೇಳಿದರು.

ಷರಿಯಾ ಸಾಧನಗಳಾದ ಬಾಂಡ್‌ಗಳು (ಹೆಚ್ಚು ನಿಖರವಾಗಿ, ಸುಕುಕ್) ಮತ್ತು ಶರಿಯಾ-ಕಾಂಪ್ಲಿಯಂಟ್ ಹೂಡಿಕೆಗಳನ್ನು ನೋಡುವ ನಿಧಿಗಳು ಭಾರತದೊಳಗಿನ ಮತ್ತು ವಿಶ್ವದ ಇತರ ಭಾಗಗಳಿಂದ ಮುಸ್ಲಿಂ ಹೂಡಿಕೆದಾರರನ್ನು ಆಕರ್ಷಿಸಬಹುದು ಎಂದು ಅವರು ಹೇಳಿದರು.

ಇಸ್ಲಾಮಿಕ್ ಫೈನಾನ್ಸ್, ಅದರ ಬಡ್ಡಿರಹಿತ ಮತ್ತು ಇಕ್ವಿಟಿ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆಯು ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಗೆ ಪೂರಕವಾಗಿದೆ ಎಂದು ಆರ್ಥಿಕ ಬಿಕ್ಕಟ್ಟುಗಳ ವಿವಿಧ ಪ್ರಕಾರಗಳು ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳಲು ಕಳೆದ ಒಂದು ದಶಕದಲ್ಲಿ ಹಣಕಾಸು ವ್ಯವಸ್ಥೆಗಳ ಬಗ್ಗೆ ಸಂಶೋಧನೆ ನಡೆಸಿದ ಹಾಝಿಕ್ ಹೇಳಿದರು. ಈಜಿಪ್ಟ್, ಇಂಡೋನೇಷ್ಯಾ, ಮಲೇಷ್ಯಾ, ಪಾಕಿಸ್ತಾನ, ಟರ್ಕಿ, ಯುಎಇ (ಜಿಸಿಸಿ) ಇತ್ಯಾದಿ ದೇಶಗಳಲ್ಲಿ ಎರಡೂ ರೀತಿಯ ಬಾಂಕ್ ಗಳು ಅಸ್ತಿತ್ವದಲ್ಲಿರುವುದನ್ನು ಅವರು ಬೊಟ್ಟು ಮಾಡಿದರು.

ಆದರೆ, ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪರಿಚಯಿಸುವ ಪ್ರಸ್ತಾಪವನ್ನು ಮುಂದುವರಿಸದಿರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿರುವುದು ಎರಡು ವರ್ಷಗಳ ಹಿಂದೆ ಸುದ್ದಿಯಾಗಿತ್ತು. 2017 ರಲ್ಲಿ ಪಿಟಿಐ ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಬ್ಯಾಂಕ್, ಎಲ್ಲಾ ನಾಗರಿಕರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಪ್ರವೇಶಿಸಲು ಲಭ್ಯವಿರುವ “ವ್ಯಾಪಕ ಮತ್ತು ಸಮಾನ ಅವಕಾಶಗಳನ್ನು” ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿತ್ತು.

ಭಾರತದಲ್ಲಿ ಶರಿಯಾ ಬ್ಯಾಂಕಿಂಗ್‌ಗೆ ಒತ್ತಾಯಿಸುವ ಸಂಸ್ಥೆಯಾದ ಇಂಡಿಯನ್ ಸೆಂಟರ್ ಫಾರ್ ಇಸ್ಲಾಮಿಕ್ ಫೈನಾನ್ಸ್ (ಐಸಿಐಎಫ್) ಪ್ರಧಾನ ಕಾರ್ಯದರ್ಶಿ ಅಬ್ದುರ್ ರಕೀಬ್ ಅವರ ಪ್ರಕಾರ, ಇಸ್ಲಾಮಿಕ್ ಬ್ಯಾಂಕಿಂಗ್ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಬೆಂಬಲವನ್ನು ನೀಡುವುದರ ಜೊತೆಗೆ ಹೆಚ್ಚಿನ ಆರ್ಥಿಕ ಸೇರ್ಪಡೆಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇಸ್ಲಾಮಿಕ್ ಬ್ಯಾಂಕಿಂಗ್ ಅನ್ನು ಪರಿಚಯಿಸಿದರೆ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಅನೌಪಚಾರಿಕ ವಲಯದ ಕಾರ್ಮಿಕ ಬಂಡವಾಳ ಅನುಪಾತವನ್ನು ಈಕ್ವಿಟಿ ಫೈನಾನ್ಸ್ ಮೂಲಕ ಪರಿಹರಿಸಬಹುದು. ಇದು ಭಾರತೀಯ ಕೃಷಿ ಮತ್ತು ಅಸಂಘಟಿತ ವಲಯದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಬಹುದು.

ಸುಧಾರಿತ ಕಾರ್ಮಿಕ ಬಂಡವಾಳ ಅನುಪಾತದೊಂದಿಗೆ, ಕೃಷಿ ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ನಮ್ಮ ದುರ್ಬಲ ಕಾರ್ಮಿಕರು ಔಪಚಾರಿಕ ವಲಯದ ಕಾರ್ಮಿಕರೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಇದರಿಂದ ಸಾಧ್ಯವಾಗುತ್ತದೆ. ಆದ್ದರಿಂದ ಇಸ್ಲಾಮಿಕ್ ಬ್ಯಾಂಕಿಂಗ್ ಬಹುಪಾಲು ಭಾರತೀಯ ಕಾರ್ಮಿಕರನ್ನು ಆರ್ಥಿಕವಾಗಿ ಸಬಲಗೊಳಿಸಬಹುದು” ಎಂದು ರಕೀಬ್ ಹೇಳಿದರು.

ಭಾರತದಲ್ಲಿ ಶರಿಯಾ ಬ್ಯಾಂಕಿಂಗ್ ಅನ್ನು ಪ್ರಾರಂಭಿಸದಿರುವ ಹಿಂದಿನ ತಡೆಗಳ ಬಗ್ಗೆ ಕೇಳಿದಾಗ, ಇಸ್ಲಾಮಿಕ್ ಬ್ಯಾಂಕಿಂಗ್ ದುರದೃಷ್ಟವಶಾತ್ ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೀಮಿತವಾದ ಧಾರ್ಮಿಕ ದತ್ತಿ ಉದ್ಯಮವೆಂದು ತಪ್ಪಾಗಿ ಗ್ರಹಿಸಲ್ಪಟ್ಟಿದೆ ಎಂದು ಅವರು ಹೇಳಿದರು. ಇಸ್ಲಾಮಿಕ್ ಬ್ಯಾಂಕಿಂಗ್ ಮುಸ್ಲಿಮರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಮತ್ತು ಎಲ್ಲರಿಗೂ ಅಲ್ಲ ಎಂಬ ತಪ್ಪು ಕಲ್ಪನೆ ಇದೆ. ಮಲೇಷ್ಯಾದಲ್ಲಿ, ಶೇಕಡಾ 40 ಕ್ಕಿಂತ ಹೆಚ್ಚು ಹೂಡಿಕೆದಾರರು ಮತ್ತು 60 ಪ್ರತಿಶತ ಸಾಲಗಾರರು ಮುಸ್ಲಿಮೇತರರು. ಮುಖ್ಯವಾಗಿ, ಮುಸ್ಲಿಮೇತರ ದೇಶವಾದ ಕೀನ್ಯಾದಲ್ಲಿ ಗಲ್ಫ್ ಆಫ್ರಿಕನ್ ಬ್ಯಾಂಕಿನಂತಹ ಬ್ಯಾಂಕುಗಳ ಗ್ರಾಹಕರಲ್ಲಿ ಶೇಕಡಾ 20 ರಷ್ಟು ಮುಸ್ಲಿಮೇತರರು ಎಂದು ರಕೀಬ್ ಹೇಳಿದ್ದಾರೆ.

ಅವರ ಪ್ರಕಾರ, ಭಾರತೀಯ ಷೇರು ಮಾರುಕಟ್ಟೆಯಲ್ಲಿ, ಮುಸ್ಲಿಮರಿಗಿಂತ ಜೈನ ಸಮುದಾಯವು ಟಾಟಾ ಎಥಿಕಲ್ ಫಂಡ್ ಮತ್ತು ಟಾರಸ್ ಎಥಿಕಲ್ ಫಂಡ್‌ನಂತಹ ಶರಿಯಾ ಕಾಂಪ್ಲಾಯಿಂಟ್ ಸ್ಟಾಕ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡಿವೆ.”ಮೊದಲ ಹಲಾಲ್ ಉತ್ಪನ್ನವಾದ ಐಬಿಎ ಕಾಸ್ಮೆಟಿಕ್ಸ್ ಅನ್ನು ಅಹಮದಾಬಾದ್ ನಲ್ಲಿ ಇಬ್ಬರು ಜೈನ ಸಹೋದರಿಯರು ಪ್ರಾರಂಭಿಸಿದರು ಮತ್ತು ಮಾರಾಟ ಮಾಡಿದರು” ಎಂದು ರಕೀಬ್ ಹೇಳಿದ್ದಾರೆ.

ಇಸ್ಲಾಮಿಕ್ ಬ್ಯಾಂಕಿಂಗ್‌ ಎಂಬ ಹೆಸರು ನಮ್ಮ ನೀತಿ ನಿರೂಪಕರಿಗೆ ಸಮಸ್ಯೆಯಾಗಿದೆ. ಬೇಕಾದರೆ ಅವರು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಪರಿಭಾಷೆಗೆ ಸರಿಯಾದ ಬೇರೆ ಭಾರತೀಯ ಹೆಸರನ್ನು ನೀಡಬಹುದು “ಎಂದು ಅವರು ಹೇಳಿದರು.

ರಘುರಾಮ್ ರಾಜನ್ ನೇತೃತ್ವದ ಹಣಕಾಸು ವಲಯ ಸುಧಾರಣಾ ಸಮಿತಿಯ (ಸಿಎಫ್‌ಎಸ್ಆರ್) ಶಿಫಾರಸುಗಳನ್ನು ಉಲ್ಲೇಖಿಸಿದ ರಕೀಬ್, ಆರ್‌ಬಿಐ ಮತ್ತು ಭಾರತ ಸರ್ಕಾರವು ಸಮಿತಿಯ ಹಲವಾರು ಸಲಹೆಗಳನ್ನು ಜಾರಿಗೆ ತಂದಿದೆ. ಬಡ್ಡಿರಹಿತ ಬ್ಯಾಂಕಿಂಗ್ ಅನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿಚಯಿಸಲು ಇದೇ ಸಮಿತಿ ಶಿಫಾರಸು ಮಾಡಿತ್ತು ಎಂದು ಅವರು ನೆನಪಿಸಿದರು.

ಕೃಪೆ: ಔಟ್ ಲುಕ್