ಸನ್ಮಾರ್ಗ ವಾರ್ತೆ
ಕೊಲಂಬೊ,ನ.27: ಶ್ರೀಲಂಕಾದಲ್ಲಿ ಹೊಸ ಸರಕಾರ ಬಂದೊಡನೆ ಪ್ರಧಾನ ಪ್ರಕರಣಗಳ ತನಿಖೆ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಕೊಲೆ ಬೆದರಿಕೆ ಬಂದ ಹಿನ್ನೆಯಲ್ಲಿ ದೇಶ ತೊರೆದಿದ್ದಾರೆ. ಸಿಐಡಿ ವಿಭಾಗದ ಪ್ರಮುಖ ಅಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ನಿಶಾಂತ್ ಸಿಲ್ವಾ ಸ್ವಿಟ್ಝರ್ಲ್ಯಾಂಡ್ನಲ್ಲಿ ಆಶ್ರಯ ಕೋರಿದ್ದಾರೆ. ಸಂಡೇ ಲೀಡರ್ ಪತ್ರಿಕೆಯ ಸಂಪಾದಕ ಲಸಾಮತ ವಿಕ್ರಮತುಂಗೆ ಕೊಲೆ ಪ್ರಕರಣದ ತನಿಖೆ ನಿಶಾಂತ್ ನೇತೃತ್ವದಲ್ಲಿ ನಡೆದಿತ್ತು.
ಗೊಟಬಯ ರಾಜಪಕ್ಷೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೆ ನಿಶಾಂತ್ಗೆ ಕೊಲೆ ಬೆದರಿಕೆ ಬಂದಿತ್ತು. ಮಹಿಂದಾ ರಾಜಪಕ್ಷೆ ಅಧ್ಯಕ್ಷರಾಗಿದ್ದ 2005-15ರಲ್ಲಿ ನಡೆದಿದ್ದ ಕೊಲೆ ಪ್ರಕರಣ, ಅಪಹರಣ, ಭ್ರಷ್ಟಾಚಾರ ಪ್ರಕರಣಗಳನ್ನು ನಿಶಾಂತ್ ತನಿಖಿಸಿದ್ದರು. ಗೊಟಬಯ ಕೂಡ ಇವರ ತನಿಖೆಯ ವ್ಯಾಪ್ತಿಯೊಳಗೆ ಬಂದಿದ್ದರು.
2008-2009ರಲ್ಲಿ ಲಂಚ ಪಡೆದು ಹನ್ನೊಂದು ತಮಿಳು ಯುವಕರನ್ನು ನೌಕಾಧಿಕಾರಿಗಳು ಅಪಹರಣ ನಡೆಸಿದ ಘಟನೆ, ಪತ್ರಕರ್ತ ಕೀತ್ ನೋಯರ್, ಉಪಲಿ ಟೆನ್ನಕ್ಕೂನ್ರ ಕೊಲೆ ಸಹಿತ ವಿವಿಧ ಪ್ರಕರಣಗಳನ್ನು ನಿಶಾಂತ್ ತನಿಖೆ ನಡೆಸಿದ್ದರು. ಕಳೆದ ವರ್ಷ ಮಹಿಂದಾ ರಾಜಪಕ್ಷೆ ಪ್ರಧಾನಿಯಾದ ಕೂಡಲೇ ನಿಶಾಂತ್ರನ್ನು ಸಿಐಡಿ ಕಚೇರಿಯಿಂದ ವರ್ಗಾಯಿಸಿದ್ದರು. ರಾಜಪಕ್ಷೆ ಅಧಿಕಾರ ಕಳಕೊಂಡ ಕೂಡಲೇ ಈ ಸ್ಥಾನಕ್ಕೆ ಅವರು ಮರಳಿ ನೇಮಕವಾಗಿದ್ದರು.
ಈ ನಡುವೆ ಅಧಿಕಾರಿಗಳು ದೇಶ ತೊರೆಯದಂತೆ ವಿಮಾನ ನಿಲ್ದಾಣಗಳಲ್ಲಿ ಸರಕಾರ ಎಚ್ಚರಿಕೆ ಸೂಚನೆ ನೀಡಿದೆ. ಸಿಐಡಿ ವಿಭಾಗದ 704 ಅಧಿಕಾರಿಗಳ ಹೆಸರುಗಳನ್ನು ಎಮಿಗ್ರೇಶನ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದರು.












