ಎನ್ ಪಿ ಆರ್ ನಲ್ಲಿ ಬ್ಯಾರಿ ಭಾಷೆಯ ಅವಗಣನೆ: ಪಟ್ಟಿ ಪರಿಷ್ಕರಿಸಿ ಬ್ಯಾರಿ ಭಾಷೆಯನ್ನು ನಮೂದಿಸಿ ಎಂದು ಪತ್ರ ಬರೆದು ಒತ್ತಾಯಿಸಿದ ರಹೀಮ್ ಉಚ್ಚಿಲ್

0
798

ಸನ್ಮಾರ್ಗ ವಾರ್ತೆ
ಮಂಗಳೂರು ಡಿ. 31- ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಬ್ಯಾರಿ ಭಾಷೆಯನ್ನು ಪರಿಷ್ಕರಿಸಿ ನಮೂದಿಸಲು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರವು ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು 2007ರಲ್ಲಿ ಸ್ಥಾಪಿಸಿದ್ದು ಕಳೆದ 12 ವರ್ಷಗಳಲ್ಲಿ ಅಕಾಡೆಮಿಯು ಕರಾವಳಿ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆ ಮತ್ತು ಹೊರ ರಾಜ್ಯಗಳಲ್ಲಿರುವ ಬ್ಯಾರಿ ಸಮುದಾಯದ ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜನಪದ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದೆ. ವಿಶ್ವದಾದ್ಯಂತ ಇರುವ 30 ಲಕ್ಷ ಬ್ಯಾರಿಗಳಲ್ಲಿ ಜಾಗೃತಿ ಮೂಡಿಸಲು ಅಕಾಡೆಮಿ ಸಫಲವಾಗಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 12 ಲಕ್ಷ, ಉಡುಪಿ ಜಿಲ್ಲೆಯಲ್ಲಿ ಸುಮಾರು 8 ಲಕ್ಷ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 4 ಲಕ್ಷ, ಮಡಿಕೇರಿಯಲ್ಲಿ 1.5 ಲಕ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 1.5 ಲಕ್ಷ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬ್ಯಾರಿ ಭಾಷೆ ಮಾತಾಡುವ ಜನರಿದ್ದಾರೆ. ಹೀಗಿದ್ದೂ ಈಗಾಗಲೇ ಬಿಡುಗಡೆಯಾಗಿರುವ ಎನ್ ಪಿ ಆರ್ ಪಟ್ಟಿಯಲ್ಲಿ ಬ್ಯಾರಿ ಭಾಷೆಯನ್ನು ನಮೂದಿಸಿಲ್ಲ. ಈಗಾಗಲೇ ಬ್ಯಾರಿ ಭಾಷೆ ಮುಂದಿನ ಶೈಕ್ಷಣಿಕ ಆರನೇ ತರಗತಿಯಿಂದ ಪಿಯುಸಿಯವರೆಗೆ ತೃತೀಯ ಭಾಷೆಯಾಗಿ ಅನುಮೋದಿಸಲು ಸರಕಾರದಿಂದ ಮಾನ್ಯತೆ ಸಿಕ್ಕಿದೆ ಮತ್ತು 2019 20 ನೇ ಸಾಲಿನಲ್ಲಿ ಬ್ಯಾರಿ ಅಕಾಡೆಮಿಗೆ ನೂತನ ಕಟ್ಟಡ, ಬ್ಯಾರಿ ಭವನ ನಿರ್ಮಾಣಕ್ಕೆ ಆರು ಕೋಟಿ ರೂಪಾಯಿ ಮಂಜೂರಾತಿ ಸಿಕ್ಕಿದೆ.

ಇದಕ್ಕಿಂತ ಕಡಿಮೆ ಭಾಷೆ ಮಾತನಾಡುವ ಮಂದಿಯಿರುವ ಅರೆಭಾಷೆ ಹಾಗೂ ಕೊಡವ ಭಾಷೆಯು ಎನ್ ಪಿ ಆರ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂದು ರಹೀಮ್ ಉಚ್ಚಿಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಸರಗೋಡಿನ ಚಂದ್ರಗಿರಿ ಯಿಂದ ಉಡುಪಿ ಜಿಲ್ಲೆಯ ಬಾರ್ಕೂರು ತನಕದ ಈ ವ್ಯಾಪ್ತಿಯು ಬ್ಯಾರಿ ಭಾಷೆಯ ಉಗಮ ಸ್ಥಾನವಾಗಿದೆ. ಈ ವ್ಯಾಪ್ತಿಗೆ ಬರುವ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಲಾಗಿದ್ದು, ತಾವು ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಮಾಹಿತಿಯನ್ನು ನೀಡಿ ಬ್ಯಾರಿ ಭಾಷೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪರಿಷ್ಕರಿಸಿ ನಮೂದಿಸಲು ಬೇಕಾಗುವ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.