ಸನ್ಮಾರ್ಗ ವಾರ್ತೆ-
ಬೀಜಿಂಗ್, ಜ. 10: ಇರಾನಿನೊಂದಿಗಿರುವ ಅಣು ಒಪ್ಪಂದ ರದ್ದುಪಡಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಸಲಹೆಯನ್ನು ಚೀನ ತಿರಸ್ಕರಿಸಿದೆ. 2015ರ ಒಪ್ಪಂದದಿಂದ ಹೊರಬರಬೇಕು ಮತ್ತು ಹೊಸ ಒಪ್ಪಂದ ಮಾಡಿಕೊಳ್ಳಬೇಕೆಂದು ಟ್ರಂಪ್ ಆಗ್ರಹಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಈಗಿನ ಸಮಸ್ಯೆಗೆ ಮೂಲಕಾರಣ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದೇ ಆಗಿದೆ ಎಂದು ಚೀನ ವಿದೇಶ ಸಚಿವ ಜಂಗ್ ಶುಯಾಂಗ್ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾಯಂ ಸದಸ್ಯರು ಮತ್ತು ಜರ್ಮನಿ, ಯುರೋಪಿಯನ್ ಯೂನಿಯನ್ ಸಹಿತ 2015ರಲ್ಲಿ ಇರಾನ್ನೊಂದಿಗೆ ಅಣು ಸಹಕಾರ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದಿಂದ ಹೊರಗೆ ಬರಲು ಈಗ ಸಮಯ ಆಗಿದೆ ಎಂದು ಬುಧವಾರ ಟ್ರಂಪ್ ಇತರ ದೇಶಗಳಿಗೆ ತಿಳಿಸಿದ್ದರು. ಇರಾನ್ನೊಂದಿಗೆ ಬೇರೆ ಒಂದು ಒಪ್ಪಂದ ಮಾಡಿಕೊಂಡು ಜಗತ್ತಿನಲ್ಲಿ ಶಾಂತಿ ಮತ್ತು ಸುರಕ್ಷೆಯನ್ನು ತರಬೇಕೆಂದು ಟ್ರಂಪ್ ಕರೆ ನೀಡಿದ್ದರು. ಚೀನ ಇದಕ್ಕೆ ಕಿವಿಗೊಡಲು ಸಿದ್ಧವಾಗದೆ ಟ್ರಂಪ್ ಆಗ್ರಹಕ್ಕೆ ತಣ್ಣೀರೆರಚಿದೆ.












