ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 14: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಣದುಬ್ಬರ 7.35ಕ್ಕೆ ತಲುಪಿದ್ದನ್ನು ಸೂಚಿಸಿ ಬಿಜೆಪಿ ಸರಕಾರ ವಿರುದ್ಧ ಕಟು ಟೀಕೆ ಮಾಡಿದ್ದಾರೆ. ಬಿಜೆಪಿ ಸರಕಾರ ಬಡವರ ಹೊಟ್ಟೆಗೆ ತುಳಿದಿದೆ ಎ೦ದು ಅವರು ಹೇಳಿದರು.
ತರಕಾರಿ, ಆಹಾರ ಸಾಮಗ್ರಿಗಳ ಬೆಲೆಯೇರಿಕೆಯಿಂದಾಗಿ ಜನರು ಖರೀದಿಸುವ ಸ್ಥಿತಿಯಲ್ಲಿಲ್ಲ. ತರಕಾರಿ, ಎಣ್ಣೆ, ಬೇಳೆ, ಹಿಟ್ಟಿನ ಬೆಲೆ ಹೆಚ್ಚಳವಾಗಿದೆ. ಹಾಗಿರುವಾಗ ಬಡವರು ತಿನ್ನುವುದು ಏನನ್ನು? ಆರ್ಥಿಕ ಮಾಂದ್ಯದಿಂದಾಗಿ ಬಡವರಿಗೆ ಕೆಲಸವೂ ಸಿಗುತ್ತಿಲ್ಲ. ಬಿಜೆಪಿ ಕಿಸೆ ಕತ್ತರಿಸಿ ಬಡವರ ಹೊಟ್ಟೆಗೆ ಹೊಡೆಯುತ್ತಿದೆ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ಹಣದುಬ್ಬರ 2019ರಲ್ಲಿ ತೀವ್ರ ಹೆಚ್ಚಳವಾಗಿದೆ. ಶೇ.7.35ಕ್ಕೆ ತಲುಪಿದೆ. ಹಣದುಬ್ಬರವು ಸಮಾಧಾನಕರ ಮಟ್ಟಕ್ಕಿಂತ ತೀರಾ ಹೆಚ್ಚು ಇದೆ, ಆಹಾರ ವಸ್ತುಗಳ ಬೆಲೆ ತೀವ್ರವಾಗಿ ಹೆಚ್ಚಿದ್ದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.












