ಬಿಜೆಪಿಯನ್ನು ನಂಬಬೇಡಿ; ನಿರುದ್ಯೋಗ, ರೈತರ ಸಮಸ್ಯೆಯನ್ನು ಬಿಟ್ಟು ಹಿಂದೂ ಮುಸ್ಲಿಮರನ್ನು ವಿಭಜಿಸುತ್ತಿದೆ – ಭೂಪೇಶ್ ಬಘೇಲ್

0
1643

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 6: ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಜನರನ್ನು ವಂಚಿಸುತ್ತಿದೆ ಎಂದು ಛತ್ತೀಸ್‍ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದರು. ನಿರುದ್ಯೋಗ, ರೈತರ ಬಿಕ್ಕಟ್ಟು ಪರಿಹರಿಸಲು ಬಿಜೆಪಿಗೆ ಸಾಧ್ಯವಿಲ್ಲ. ಅದನ್ನು ಮುಚ್ಚಿಟ್ಟು ಹಿಂದೂ- ಮುಸ್ಲಿಂ ವಿಭಜನೆಯನ್ನು ಚರ್ಚಿಸುತ್ತಿದೆ ಎಂದು ಬಘೇಲ್ ಟೀಕಿಸಿದರು. ದಿಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. ದೇಶದ ಜನಸಾಮಾನ್ಯರಿಗೆ ಯಾವ ಪ್ರಯೋಜನವಿರುವ ಕಾರ್ಯವನ್ನೂ ಬಿಜೆಪಿ ಜಾರಿಗೊಳಿಸುತ್ತಿಲ್ಲ. ರೈತರು ಈಗಲೂ ಸಮಸ್ಯೆಯಲ್ಲಿದ್ದಾರೆ. ನಿರುದ್ಯೋಗ, ಹಣದುಬ್ಬರ ಇತಿಹಾಸದ ಅತ್ಯಂತ ಉನ್ನತ ಸ್ಥರದಲ್ಲಿದೆ. ಸಮಸ್ಯೆಗಳಿಗೆ ಪರಿಹಾರ ಮಾಡದೆ ಬಿಜೆಪಿ ಸರಕಾರ ಪೌರತ್ವ ಕಾನೂನು ಜಾರಿಗೊಳಿಸಲು ಅವಸರಿಸುತ್ತಿದೆ ಎಂದು ಬಘೇಲ್ ಹೇಳಿದರು.

ಬಿಜೆಪಿ ಹಿಂದೂಗಳು ಮತ್ತು ಮುಸ್ಲಿಮರ ಕುರಿತು ಮಾತಾಡುತ್ತಿದೆ. ಆದರೆ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರುದ್ಧ ನಾವು ಮಾತಾಡುತ್ತಿದ್ದೇವೆ ಎಂದು ಭೂಫೇಶ್ ಬಘೇಲ್ ಬೆಟ್ಟು ಮಾಡಿದರು. ದಿಲ್ಲಿಯಲ್ಲಿ ಐದು ವರ್ಷ ಅರವಿಂದ್ ಕೇಜ್ರಿವಾಲ್ ಮಾಡಿದ್ದನ್ನು ಒಂದು ವರ್ಷದಲ್ಲಿ ಮಾಡಿ ಪೂರ್ತಿ ಗೊಳಿಸುತ್ತೇವೆ ಎಂದು ಬಘೇಲ್ ಹೇಳಿದರು.