ಶಾಹೀನ್ ನಲ್ಲಿ ಗುಂಡು ಹಾರಿಸಿದ ಕಪಿಲ್ ಎಎಪಿ ಬೆಂಬಲಿಗ ಎಂದಿದ್ದ ದೆಹಲಿಯ ಉಪ ಪೊಲೀಸ್ ಆಯುಕ್ತರಿಗೆ ನಿರ್ಬಂಧ ಹೇರಿದ ಚುನಾವಣಾ ಆಯೋಗ

0
1254

ಸನ್ಮಾರ್ಗ ವಾರ್ತೆ

ಶಹೀನ್ ಬಾಗ್ ನಲ್ಲಿ ಗುಂಡು ಹಾರಿಸಿದ ಕಪಿಲ್ ಬೈಸಲಾ ಕಳೆದ ವರ್ಷ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿಕೊಂಡಿದ್ದ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ದೆಹಲಿಯ ಉಪ ಪೊಲೀಸ್ ಆಯುಕ್ತ (ಅಪರಾಧ ಶಾಖೆ) ರಾಜೇಶ್ ಡಿಯೊ ಅವರನ್ನು ಚುನಾವಣಾ ಆಯೋಗ ಮತದಾನ ಕರ್ತವ್ಯದಿಂದ ಹೊರಹಾಕಿದೆ. ಡಿಯೋ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ದೃಢಪಡಿಸಲಾಗಿಲ್ಲ ಮತ್ತು ಚುನಾವಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಮತದಾನ ಸಮಿತಿ ಹೇಳಿದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಫೆಬ್ರವರಿ 1 ರಂದು ಶಾಹೀನ್ ಬಾಗ್‌ನಲ್ಲಿ ಕಪಿಲ್ ಬೈಸಲಾ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಆತ ಮತ್ತು ಅವನ ತಂದೆ ಗಜೆ ಸಿಂಗ್ ಎಎಪಿ ಸದಸ್ಯರಾಗಿದ್ದಾರೆ ಎಂದು ಡಿಯೋ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

“ಒಂದು ವರ್ಷದ ಹಿಂದೆ ಕಪಿಲ್ ಬೈಸಲಾ ಮತ್ತು ಅವನ ತಂದೆ ಎಎಪಿಗೆ ಸೇರಿದ್ದರು ಎಂದು ತೋರಿಸುವ ಫೋಟೋಗಳನ್ನು ನಾವು ಪಡೆದುಕೊಂಡಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಅವನ ಮೊಬೈಲ್ ನಿಂದ ಛಾಯಾ ಚಿತ್ರಗಳನ್ನು ಅಳಿಸಲಾಗಿದೆ, ಆದರೆ ತಾಂತ್ರಿಕ ತಜ್ಞರ ಸಹಾಯದಿಂದ ನಾವು ಅವುಗಳನ್ನು ಮರುಪಡೆಡಿದ್ದೇವೆ. ನಾವು ಆರಂಭದಲ್ಲಿ ಪ್ರಶ್ನಿಸಿದಾಗ, 2019 ರ ಮೊದಲ ಭಾಗದಲ್ಲಿ ಎಎಪಿಗೆ ಸೇರಿರುವುದಾಗಿ ಆತ ನಮಗೆ ತಿಳಿಸಿದ. ನಾವು ನಿಖರವಾದ ದಿನಾಂಕವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಇದನ್ನು ದೃಢೀಕರಿಸಲು ಫೋಟೋಗಳಿವೆ ಮತ್ತು ಆತ ಈ ಫೋಟೋಗಳನ್ನು ಒಪ್ಪಿಕೊಂಡಿದ್ದಾನೆ ”ಎಂದು ಡಿಯೋ ಹೇಳಿದ್ದರು.