ಸನ್ಮಾರ್ಗ ವಾರ್ತೆ
ಪಣಜಿ, ಫೆ.10: ಪೌರತ್ವ ತಿದ್ದುಪಡಿ ಕಾನೂನನ್ನು ಕೂಡಲೇ ನಿಶ್ಶರ್ತವಾಗಿ ಹಿಂಪಡೆಯಬೇಕು ಮತ್ತು ಅದನ್ನು ವಿರೋಧಿಸುವ ಹಕ್ಕನ್ನು ದಮನಿಸಬಾರದೆಂದು ಗೋವಾ ದಾಮನ್ ಅರ್ಚ್ ಬಿಷಪ್ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಪೌರತ್ವ ಪಟ್ಟಿ, ಜನಸಂಖ್ಯಾ ರಿಜಿಸ್ಟರ್ ಜಾರಿಗೊಳಿಸುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಅರ್ಚ್ ಬಿಷಪ್ ಪಿಲಿಪ್ಪಿನರಿ ಫೆರೊವಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಫೆರೊವಾ ಗೋವಾದ ದೊಡ್ಡ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ.
ಲಕ್ಷಾ೦ತರ ಭಾರತೀಯರ ಧ್ವನಿಯನ್ನು ಆಲಿಸಬೇಕು ಎಂದು ಗೋವಾ ಕ್ಯಾಥೊಲಿಕ್ ಸಮುದಾಯ ಸರಕಾರವನ್ನು ಆಗ್ರಹಿಸುತ್ತಿದೆ. ಅವರ ವಿರೋಧಿಸುವ ಹಕ್ಕನ್ನು ದಮನಿಸಬಾರದು. ಪೌರತ್ವ ತಿದ್ದುಪಡಿ ಕಾನೂನು ನಿಶ್ಶರ್ತವಾಗಿ ಮತ್ತು ತುರ್ತಾಗಿ ಹಿಂಪಡೆಯಬೇಕು. ಎನ್ ಆರ್ ಸಿ, ಎನ್ಪಿಆರ್ ಜಾರಿಯಿಂದ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು. ಎನ್ಆರ್ ಸಿ, ಸಿಎಎ, ಎನ್ಪಿಆರ್ ತಾರತಮ್ಯದಿಂದ ಕೂಡಿದೆ ಮಾತ್ರವಲ್ಲ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ಬೆಟ್ಟು ಮಾಡಿದರು.
ದಲಿತ, ಆದಿವಾಸಿ , ವಲಸೆ ಕಾರ್ಮಿಕರು, ಅಲೆಮಾರಿಗಳ ಸಹಿತ ದಾಖಲೆಗಳು ಇಲ್ಲದ ಅಸಂಖ್ಯ ಜನವಿಭಾಗಗಳನ್ನು ಎನ್ ಆರ್ ಸಿ, ಎನ್ಪಿಆರ್ ಸಂಕಟಕ್ಕೊಡ್ಡಿದೆ ಎಂದು ಅವರು ಹೇಳಿದರು. ಎಪ್ಪತ್ತು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಮತದಾನ ಮಾಡುವ ದೊಡ್ಡ ಸಮುದಾಯವನ್ನು ಒಂದು ಬೆಳಗಾತ ದೇಶರಹಿತರನ್ನಾಗಿ ಬಯಲು ಬಂದಿಖಾನೆಗೆ ಕಳುಹಿಸುವ ಕಾನೂನು ಇದು. ಎಲ್ಲ ಪ್ರಜೆಗಳಿಗೆ ಸಂವಿಧಾನ ದೃಢಪಡಿಸಿರುವ ಸಮಾನತೆಯ ಹಕ್ಕುಗಳನ್ನು ಯೋಜನಾಬದ್ಧ ಮತ್ತು ವ್ಯವಸ್ಥಿತವಾಗಿ ಇಲ್ಲದಾಗಿಸುವುದು ಕ್ಷೋಭೆಗೆ ಕಾರಣವಾಗಲಿದೆ. ಪ್ರಮುಖ ಬುದ್ಧಿ ಜೀವಿಗಳು ಇದರ ಅಪಾಯದ ಕುರಿತು ಎಚ್ಚರಿಸುತ್ತಿದ್ದಾರೆ.
ಜಾತಿಮತಗಳ ಭೇದವಿಲ್ಲದೆ ಗೋವಾದಲ್ಲಿ ಬಹಳಷ್ಟು ಪ್ರತಿಭಟನೆ ನಡೆಯುತ್ತಿದೆ. ದೇಶದ ಜಾತ್ಯತೀತೆಯ ಪಂಚಾಂಗದ ವಿರುದ್ಧ ಧರ್ಮವನ್ನು ಸಿಎಎ ಮೂಲಕ ಉಪಯೋಗಿಸಲಾಗುತ್ತಿದೆ ಎಂದು ಅರ್ಚ್ ಬಿಷಪ್ ಹೇಳಿದರು. ಅರ್ಚ್ ಬಿಷಪ್ ಹೇಳಿಕೆಯನ್ನು ವಿರೋಧಿಸಿ ಗೊವಾ ಬಿಜೆಪಿ ರಂಗಪ್ರವೇಶಿಸಿದೆ. ಕೋಟ್ಯಂತರ ಜನರು ಬೆಂಬಲಿಸುವ ಕಾನೂನನ್ನು ಅರ್ಚ್ ಬಿಷಪ್ ಯಾಕೆ ವಿರೋಧಿಸುವುದು ಎಂದು ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಸಾವಯ್ಕರ್ ಪ್ರಶ್ನಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ತಂದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಗೋವಾ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಪ್ರಸ್ತಾವ ಪಾಸು ಮಾಡಿತ್ತು.












