ಶಾಹಿನ್ ಬಾಗ್: ರಸ್ತೆಯನ್ನು ಅನಂತ ಕಾಲದವರೆಗೆ ನಿರ್ಬಂಧಿಸುವ ಅಧಿಕಾರ ಯಾರಿಗೂ ಇಲ್ಲ- ಸುಪ್ರೀಂಕೋರ್ಟು

0
888

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 10: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧದ ಶಾಹಿನ್ ಬಾಗ್ ಪ್ರತಿಭಟನೆಯನ್ನು ಸುಪ್ರೀಂಕೋರ್ಟು ಟೀಕಿಸಿದ್ದು ಪ್ರತಿಭಟನೆಯನ್ನು ಎಷ್ಟು ದಿವಸಗಳ ವರೆಗೆ ಬೇಕಾದರೂ ಮಾಡಬಹುದು. ಆದರೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಮಾಡಬೇಕೆಂದು ಸುಪ್ರೀಂಕೋರ್ಟು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರಿಗೆ ಕೋರ್ಟು ನೋಟಿಸು ಕಳುಹಿಸಿದೆ. ಶಾಹಿನ್ ಬಾಗ್ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಳೆದವಾರ ಅರ್ಜಿಯನ್ನು ಪರಿಗಣಿಸಿದ್ದರೂ ದಿಲ್ಲಿ ವಿಧಾನಸಭಾ ಚುನಾವಣೆಗೆ ಬಾಧಕವಾಗದಿರಲೆಂದು ಅರ್ಜಿಯನ್ನು ಇಂದಿಗೆ ಮುಂದೂಡಲಾಗಿತ್ತು. ದಿಲ್ಲಿ ನೋಯ್ಡದ ಕಾಳಿಂದಿಕುಂಜ್-ಶಾಹಿನ್ ಬಾಗ್‍ನಲ್ಲಿ ನಡೆಯುವ ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು. ಪ್ರತಿಭಟನೆಯಿಂದ ಹಲವು ದಾರಿಗಳಲ್ಲಿ ವಾಹನ ಸಂಚಾರ ದಟ್ಟನೆ ಆಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಡಿಸೆಂಬರ್ ಹದಿನೈದರಿಂದ ಮಹಿಳೆಯರ ನೇತೃತ್ವದಲ್ಲಿ ಶಾಹಿನ್ ಬಾಗ್‍ನಲ್ಲಿ ಪ್ರತಿಭಟನೆ ಆರಂಭವಾಗಿತ್ತು.