ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ.12: ಜಮ್ಮು ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ನಾಯಕ, ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರನ್ನು ಸಾರ್ವಜನಿಕ ಸುರಕ್ಷಾ ಕಾನೂನಿನಡಿಯಲ್ಲಿ (ಪಿಎಸ್ಎ) ಬಂಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯಿಂದ ಸುಪ್ರೀಂಕೋರ್ಟು ಜಡ್ಜ್ ಜಸ್ಟಿಸ್ ಮೋಹನ್ ಎಂ. ಶಾಂತನುಗೌಡರ್ ಹಿಂದೆ ಸರಿದಿದ್ದಾರೆ. ಹಿಂದೆ ಸರಿದದ್ದಕ್ಕೆ ಅವರು ಕಾರಣವನ್ನು ತಿಳಿಸಿಲ್ಲ. ಉಮರ್ ಅಬ್ದುಲ್ಲ ಸಹೋದರಿ ಸಾರಾ ಅಬ್ದುಲ್ಲ ಸಹೋದರನಿಗಾಗಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಆಗಸ್ಟ್ ಐದರಿಂದ ಉಮರ್ ಗೃಹ ಬಂಧನದಲ್ಲಿದ್ದಾರೆ. ಅವರ ತಂದೆ ಮಾಜಿ ಮುಖ್ಯಮಂತ್ರಿ, ಸಂಸದ ಫಾರೂಕ್ ಅಬ್ದುಲ್ಲ, ಮಾಜಿ ಮುಖ್ಯಮಂತ್ರಿ ಪಿಡಿಪಿಯ ಮೆಹಬೂಬ ಮುಫ್ತಿ ಸಹಿತ ಹಲವು ರಾಜಕಾರಣಿಗಳು ಏಳು ತಿಂಗಳಿನಿಂದ ಬಂಧನದಲ್ಲಿದ್ದಾರೆ.
ಕಳೆದ ಫೆಬ್ರವರಿ ಐದರಿಂದ ಉಮರ್ ಅಬ್ದುಲ್ಲರ ಮೇಲೆ ಪಿಎಸ್ಎ ಹೊರಿಸಲಾಗಿದೆ. ಮೆಹಬೂಬ ಮುಫ್ತಿಯವರ ಮೇಲೆಯೂ ಕಳೆದವಾರ ಪಿಎಸ್ಎ ಹೇರಲಾಗಿದೆ. ಈ ಕಾನೂನಿನ ಪ್ರಕಾರ ಒಬ್ಬರನ್ನು ವಿಚಾರಣೆಯಿಲ್ಲದೆ ಎರಡು ವರ್ಷ ಬಂಧಿಸಿಡಬಹುದಾಗಿದೆ.












