ಸನ್ಮಾರ್ಗ ವಾರ್ತೆ
ಭೋಪಾಲ, ಫೆ. 18: ಬಿಹಾರದ ಮುಖ್ಯಮಂತ್ರಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರ ಎನ್‍ಡಿಎ ಮೈತ್ರಿಯನ್ನು ಚುನಾವಣಾ ತಂತ್ರಜ್ಞ ಮತ್ತು ಮಾಜಿ ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಉಗ್ರವಾಗಿ ಟೀಕಿಸಿದ್ದಾರೆ. ಜೆಡಿಯುಗೆ ಎನ್‍ಡಿಎ ಸಖ್ಯವನ್ನು ಸೇರುವ ಅಗತ್ಯವೇನಿದೆ? 2005ರಲ್ಲಿ ದೇಶದ ಅತ್ಯಂತ ಬಡ ರಾಜ್ಯವಾಗಿದ್ದ ಬಿಹಾರ ಈಗಲೂ ಹಾಗೆಯೇ ಇದೆ. ರಾಜ್ಯದ ವಿಕಾಸದ ಕುರಿತು ಬಹಿರಂಗ ಚರ್ಚೆಗೆ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ರಿಗೆ ಸವಾಲು ಹಾಕಿದರು. ಪ್ರಶಾಂತ್ ಕಿಶೋರ್ ರನ್ನು ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಮತ್ತು ರಾಷ್ಟ್ರೀಯ ಪೌರತ್ವ ಪಟ್ಟಿಯ ವಿರುದ್ಧ ಬಹಿರಂಗವಾಗಿ ಮಾತಾಡಿದ್ದಕ್ಕಾಗಿ ಜೆಡಿಯುವಿನಿಂದ ಪ್ರಶಾಂತ್ ಕಿಶೋರ್ ಹೊರದಬ್ಬಲ್ಪಟ್ಟಿದ್ದರು. ತನ್ನ ಮುಂದಿನ ಕಾರ್ಯಕ್ರವನ್ನು ವಿವವರಿಸುವಾಗ ಪ್ರಶಾಂತ್ ಕಿಶೋರ್ ನಿತೀಶ್ ಮತ್ತು ಜೆಡಿಯುವನ್ನು ಟೀಕಿಸಿದರು.
ನಿತೀಶ್ ಕುಮಾರ್ ರೊಂದಿಗೆ ಉತ್ತಮ ಸಂಬಂಧ ಮುಂದುವರಿದಿದೆ. ಅವರ ಮೇಲೆ ಗೌರವವಿದೆ. ಅವರ ತೀರ್ಮಾನಗಳನ್ನು ನಾನು ಪ್ರಶ್ನಿಸುವುದಿಲ್ಲ. ಗಾಂಧೀಜಿಯ ಆಶಯಗಳನ್ನು ತಾನು ಮತ್ತು ತನ್ನ ಪಾರ್ಟಿ ಸದಾ ಬಿಗಿಯಾಗಿ ಹಿಡಿಯುತ್ತೇವೆ ಎಂದು ಅವರು ಈ ಹಿಂದೆ ಹೇಳಿದ್ದರು. ಆದರೆ ಈಗ ಗೋಡ್ಸೆಯನ್ನು ಬೆಂಬಲಿಸುವವರು ಅವರ ಸಂಗಡಿಗರಾಗಿದ್ದಾರೆ ಎಂದಿದ್ದಾರೆ.
ಪಾರ್ಟಿಯಿಂದ ಹೊರಹಾಕಲಾದ ಬಳಿಕ ರಾಜ್ಯದಲ್ಲಿ ಫೆಬ್ರವರಿ 20ಕ್ಕೆ ಆರಂಭಿಸುವ ಬಾತ್ ಬಿಹಾರ್ ಕಿ ಎಂಬ ಪ್ರಚಾರ ಕಾರ್ಯಕ್ರಮವನ್ನು ಘೋಷಿಸಿ ಅವರು ಮಾತಾಡುತ್ತಿದ್ದರು. ಬಿಹಾರವನ್ನು ಉನ್ನತ ಹತ್ತು ರಾಜ್ಯಗಳ ಸಾಲಿನಲ್ಲಿ ತರುವುದು ಕಾರ್ಯಕ್ರಮದ ಉದ್ದೇಶ ಎಂದು ಅವರು ತಿಳಿಸಿದರು. ಮುಂದಿನ ನೂರು ದಿವಸದಲ್ಲಿ ಇದಕ್ಕಾಗಿ ರಾಜ್ಯದಾದ್ಯಂತ ಒಂದು ಕೋಟಿ ಯುವಕರನ್ನು ಒಗ್ಗೂಡಿಸುವುದಾಗಿ ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಮಾತಾಡಿದ್ದಕ್ಕಾಗಿ ಜೆಡಿಯುವಿನಿಂದ ಮಾಜಿ ರಾಜ್ಯಸಭಾ ಸದಸ್ಯ ಪವನ್ ಕೆ. ವರ್ಮರನ್ನು ಕೂಡ ಉಚ್ಚಾಟಿಸಲಾಗಿತ್ತು.












