ಸನ್ಮಾರ್ಗ ವಾರ್ತೆ
ದೆಹಲಿ; ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಚರ್ಚಿಸಲು ಸಮಯ ನೀಡಬೇಕೆಂದು ಕೋರಿ ಮಾಡಿದ ಮನವಿಗೆ ಸ್ಪಂದಿಸದ ಕಾರಣ ಐಎಎಸ್ ವಿಶ್ರಾಂತ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ತೀವ್ರ ದಾಳಿ ನಡೆಸಿದ ಒಂದು ದಿನದ ನಂತರ, ಈಗ ಸ್ವರಾಜ್ ಭಾರತ ಅಧ್ಯಕ್ಷ ಯೋಗೇಂದ್ರ ಯಾದವ್ ಅವರು ಷಾ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕುರಿತು ಚರ್ಚಿಸುವುದಕ್ಕಾಗಿ ಸಮಯ ನೀಡಿ ಎಂದವರು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಕಣ್ಣನ್ ಅವರು ಟ್ವೀಟ್ ಮಾಡಿದ್ದು, ತಾನು ಮನವಿ ಮಾಡಿಕೊಂಡು ಮೂರು ದಿನಗಳಾದ ಬಳಿಕವೂ ಗೃಹ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಶ್ರಾಂತ ಐಎಎಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 13 ರಂದು, ಟೈಮ್ಸ್ ನೌ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಗೃಹ ಸಚಿವರು, “ಯಾರೊಂದಿಗೆಯೇ ಆಗಲಿ, ಪೌರತ್ವ ಕಾಯ್ದೆಯ ಕುರಿತು ಚರ್ಚಿಸಲು ನಾನು ಸಿದ್ಧನಿದ್ದೇನೆ. ಯಾವುದೇ ಪ್ರತಿಭಟನಾಕಾರರಿಗೆ ನಾನು ಮೂರು ದಿನಗಳಲ್ಲಿ ಸಮಯವನ್ನು ನೀಡುತ್ತೇನೆ. ಇದರಿಂದ ಪೌರತ್ವ ಕಾನೂನಿನ ಬಗ್ಗೆ ತಪ್ಪು ಕಲ್ಪನೆಗಳನ್ನು ದೂರೀಕರಿಸಬಹುದು ಎಂದಿದ್ದರು. ಈ ಹೇಳಿಕೆಯ ನಂತರ, ಅನೇಕರು ಚರ್ಚೆಗಾಗಿ ಸಮಯ ಕೋರಿ ಮನವಿ ಮಾಡಿಕೊಂಡರಾದರೂ ಕೇಂದ್ರ ಗೃಹ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಫೆಬ್ರವರಿ 16 ರಂದು, ಶಾಹೀನ್ ಬಾಗ್ಪ್ರತಿಭಟನಾಕಾರರು ಷಾ ಅವರ ನಿವಾಸದ ಕಡೆಗೆ ಹೊರಟರು. ಆದರೆ ದೆಹಲಿ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು ಮತ್ತು ದೆಹಲಿಯ ಗೃಹ ಸಚಿವರ ನಿವಾಸಕ್ಕೆ ಬ್ಯಾರಿಕೇಡ್ ಹಾಕಿದರು.












