ಸೌದಿ ಅರೇಬಿಯ: 27 ವರ್ಷಗಳ ಹಿಂದೆ ಗಂಡು ಮಕ್ಕಳನ್ನು ಕದ್ದಿದ್ದ ಮರ್ಯಮ್; ಪ್ರಕರಣ ಬಯಲಿಗೆ ಬಂದದ್ದು ಹೀಗೆ?

0
1186

ಸನ್ಮಾರ್ಗ ವಾರ್ತೆ

ರಿಯಾದ್, ಫೆ. 20: ಹುಟ್ಟಿದ್ದೆಲ್ಲ ಹೆಣ್ಣುಮಕ್ಕಳಾದಾಗ ಆಸ್ಪತ್ರೆಯಿಂದ ಗಂಡು ಮಕ್ಕಳನ್ನು ಕದ್ದುಕೊಂಡು ಹೋಗಿ ಸಾಕಿದ ಮಹಿಳೆಯನ್ನು ಬಂಧಿಸಲಾಗಿದೆ. ದಮ್ಮಾಮ್ ಆಸ್ಪತ್ರೆಯಿಂದ ಮೂರು ನವಜಾತ ಗಂಡು ಮಕ್ಕಳನ್ನು ಮರ್ಯಂ ಎಂಬ ಮಹಿಳೆ ಅಪಹರಿಸಿದ್ದರು. ಇದಾಗಿ ಇಪ್ಪತ್ತೇಳು ವರ್ಷದ ಬಳಿಕ ಪೊಲೀಸರು ಮರ್ಯಂರನ್ನು ಬಂಧಿಸಿದ್ದಾರೆ. ಮೂವರು ಮಕ್ಕಳೂ ಯುವಕರಾಗಿದ್ದಾರೆ. ರಾಷ್ಟ್ರೀಯ ಗುರುತು ಕಾರ್ಡ್ ಗಳಿಸಲು ಪ್ರಯತ್ನಿಸಿದಾಗ ಕಳ್ಳತನ ಬಹಿರಂಗವಾಗಿತ್ತು. ಒಬ್ಬ ಯುವಕನನ್ನು ಡಿಎನ್‍ಎ ಮೂಲಕ ಗುರುತಿಸಿ ನೈಜ ತಂದೆ ತಾಯಿಗಳಿಗೆ ಒಪ್ಪಿಸಲಾಗಿದೆ. ದಮ್ಮಾಮ್‍ನಲ್ಲಿ ಕಳೆದವಾರ ಘಟನೆ ಆರಂಭವಾಗಿತ್ತು. ಮೂರು ಗಂಡು ಮಕ್ಕಳ ರಾಷ್ಟ್ರೀಯ ಗುರುತು ಕಾರ್ಡಿಗೆ ಅರ್ಜಿ ಸಲ್ಲಿಸಲು ದಮ್ಮಾಮ್‍ನ ಸ್ಟೇಶನ್‍ಗೆ ಬಂದಿದ್ದರು. ಮರ್ಯಮ್ ರಲ್ಲಿ ಜನನ ದಾಖಲೆಗಳು ಇರಲಿಲ್ಲ. ಪೊಲೀಸರು ಕೇಳಿದ ಪ್ರಶ್ನೆಗೆ ಅವರು ತಡವರಿಸಿದರು. ಕೊನೆಗೆ 20 ವರ್ಷದ ಹಿಂದೆ ಮಕ್ಕಳು ತನಗೆ ಅನಾಥರಾಗಿ ಸಿಕ್ಕಿದರು ಎಂದು ಮರ್ಯಂ ಪೊಲೀಸರಿಗೆ ಹೇಳಿದ್ದರು. ಸಂದೇಹವಾಗಿ ಕಾಣೆಯಾದ ಮಕ್ಕಳ ಪಟ್ಟಿ ಪರಿಶೀಲಿಸಿದರು. ಜೊತೆಗೆ ಡಿಎನ್‍ಎ ಪರೀಕ್ಷೆ ಕೂಡ ಮಾಡಿದರು. ಆಗ ಸತ್ಯ ಹೊರಬಂತು. ಮೊದಲ ಮಗುವನ್ನು 1993ರಲ್ಲಿ, ಎರಡನೆಯದ್ದನ್ನು 1996ರಲ್ಲಿ ಮತ್ತು ಮೂರನೆಯದ್ದನ್ನು 1999ರಲ್ಲಿ ಮರ್ಯಂ ಆಸ್ಪತ್ರೆಯಿಂದ ಕದ್ದುಕೊಂಡು ಹೋಗಿದ್ದರು.

ಕಳ್ಳತನದ ದೃಶ್ಯಗಳು ಆಸ್ಪತ್ರೆಯಿಂದ ಸಿಕ್ಕಿದವು. ಎರಡು ಹೆಣ್ಣುಮಕ್ಕಳ ತಾಯಿ ಮರ್ಯಂ ಗಂಡು ಮಕ್ಕಳಿಲ್ಲದ ದುಃಖ ಸಹಿಸಲು ಇಂತಹ ಕಳ್ಳತನಕ್ಕೆ ಇಳಿದಿದ್ದರು. ಆದರೆ, ಅವರ ದಾಂಪತ್ಯ ಜೀವನ ನಾಶವಾಗಿತ್ತು. ಮಕ್ಕಳ ಕುರಿತ ವಿವಾದದಲ್ಲಿ ಮೊದಲ ಮತ್ತು ಎರಡನೆ ಗಂಡ ಅವರನ್ನು ತೊರೆದಿದ್ದರು. ಈಗ ಉಳಿದ ಇಬ್ಬರು ಗಂಡು ಮಕ್ಕಳನ್ನು ಪತ್ತೆಹಚ್ಚುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ಮರ್ಯಂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.