ಇಸ್ಲಾಂನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ – ೧

0
1471

– ಯೋಗೇಶ್ ಮಾಸ್ಟರ್

ವಿಶ್ವದ ಎಲ್ಲಾ ಧರ್ಮಗಳೂ ಮಕ್ಕಳಿಗೆ ದೊಡ್ಡವರ ಬಗ್ಗೆ ಹೀಗಿರಬೇಕು ಹಾಗಿರಬೇಕು ಎಂದು ಬೋಧಿಸಿದರೆ, ಇಸ್ಲಾಂ ಮಕ್ಕಳ ಕುರಿತಾಗಿ ಹೇಗಿರಬೇಕೆಂದು ಪೋಷಕರಿಗೆ ಮತ್ತು ಹಿರಿಯರಿಗೆ ಬೋಧಿಸುವ ಏಕೈಕ ಧರ್ಮವಾಗಿದೆ. ಇಸ್ಲಾಂ ಧರ್ಮದ ತಳಪಾಯವೇ ನೈತಿಕತೆ. ಈ ನೈತಿಕತೆಯು ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಇರುವಂತೆ ನೋಡಿಕೊಳ್ಳುತ್ತಾ ಅದನ್ನು ಮಗುವನ್ನು ಉಪಚರಿಸುವ ಪ್ರಾರಂಭದಿಂದಲೇ ಗಟ್ಟಿಗೊಳಿಸುತ್ತದೆ. ನೈತಿಕತೆಯನ್ನು ಗಾಢಗೊಳಿಸಲೆಂದೇ ಇಸ್ಲಾಂ ಅದನ್ನು ಧಾರ್ಮಿಕಗೊಳಿಸುತ್ತದೆ. ಅದು ಅದರ ನೈತಿಕ ಶಿಸ್ತಿನ ಸೌಂದರ್ಯ.

ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ತೈತ್ತಿರೀಯೋಪನಿಷತ್‍ನ ಶಿಕ್ಷಾವಲ್ಲಿಯಲ್ಲಿ ಹೇಳುವಂತೆ ವಿದ್ಯಾರ್ಥಿಗೆ ಅಥವಾ ಮಕ್ಕಳಿಗೆ ಸಾಧಾರಣವಾಗಿ ಎಲ್ಲಾ ಧಾರ್ಮಿಕತೆಗಳಲ್ಲಿ ತಂದೆ, ತಾಯಿ ಮತ್ತು ಇತರ ಗುರುಹಿರಿಯರ ಬಗ್ಗೆ ಮಕ್ಕಳ ಕರ್ತವ್ಯಗಳ ಮೇಲೆ ಪ್ರಾಧಾನ್ಯತೆ ನೀಡಿದರೆ, ಇಸ್ಲಾಂ ಮಕ್ಕಳ ಹಕ್ಕುಗಳ ಬಗ್ಗೆ ಧ್ವನಿ ಎತ್ತುತ್ತದೆ.

ಮಕ್ಕಳ ಮೌಲ್ಯಗಳನ್ನು ಗುರುತಿಸುವ ನಿಟ್ಟಿನಲ್ಲಿ ಎತ್ತುವ ಮಕ್ಕಳ ಈ ವಿಶೇಷ ಹಕ್ಕುಗಳು ಪೋಷಕರ, ಸಮುದಾಯಗಳ ಅಥವಾ ಸರಕಾರಗಳಿಂದ ಗ್ಯಾರಂಟಿ ಕೊಡುತ್ತಿರುವುದಲ್ಲ, ದೇವರೇ ಹೊಣೆಗಾರನಾಗುವ ಮೂಲಕ ಮಕ್ಕಳ ಹಕ್ಕಿಗೆ ಪ್ರಾತಿನಿಧ್ಯವಿದೆ.

ಮಕ್ಕಳಿಗಾಗಿ ವಾಗ್ದಾನ:-

ಇಸ್ಲಾಂ ತನ್ನ ನೈತಿಕ ಚೌಕಟ್ಟನ್ನು ಕಟ್ಟಿಕೊಟ್ಟು ಅದರಲ್ಲಿ ಪ್ರತಿಯೊಬ್ಬರ ವ್ಯಕ್ತಿಗತವಾದಂತಹ ಹಕ್ಕುಗಳನ್ನು ಸಾಮಾಜಿಕವಾಗಿ ಅವರವರ ಬದುಕಿಗೆ ಕಟ್ಟಿಕೊಡುತ್ತಾ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುತ್ತದೆ. ಮಗುವಿನ ಹಕ್ಕು ಮಗುವು ಹುಟ್ಟುವ ಮುನ್ನವೇ ಚಾಲ್ತಿಗೆ ಬರುತ್ತದೆ. ಗರ್ಭದಲ್ಲಿರುವ ಮಗುವನ್ನು ಕೊಲ್ಲುವುದನ್ನು ಒಪ್ಪದ ಕುರಾನ್ (6:151) “ಬಡತನದ (ದಾರಿದ್ರ್ಯದ) ಕಾರಣಕ್ಕಾಗಿ ನಿಮ್ಮ ಮಕ್ಕಳನ್ನು ಕೊಲೆ ಮಾಡದಿರಿ. ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಪೋಷಣೆಯನ್ನು ನಾವೊದಗಿಸುತ್ತೇವೆ” ಎಂಬ ವಾಗ್ದಾನ ಅಲ್ಲಿದೆ.

ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತಾ ಹಿರಿಯರಿಗೆ ಅವರನ್ನು ನೋಡಿಕೊಳ್ಳುವ ಕರ್ತವ್ಯಗಳನ್ನು ವಿಧಿಸುತ್ತದೆ. ಮಕ್ಕಳನ್ನು ನೋಡಿಕೊಳ್ಳುವುದೆಂದರೆ ಸುಲಭವಲ್ಲ ಎಂದು ಇಸ್ಲಾಂನಲ್ಲಿ ಅರಿವಿದೆ. ಆದರೂ ಕರ್ತವ್ಯ ಚ್ಯುತರಾಗಬಾರದೆಂದು ಹೇಳಲು ಮಕ್ಕಳ ಪಾಲನೆ ನಿಮ್ಮನ್ನು ಒರೆಗೆ ಹಚ್ಚುವಂತಹ ಪರಿಕ್ಷಾ ಸಾಧನವಾಗಿದೆ. ಅದನ್ನು ಸರಿಯಾಗಿ ನಿರ್ವಹಿಸಿದ್ದೇ ಆದಲ್ಲಿ ಅಲ್ಲಾಹನ ಅನುಗ್ರಹದ ಪ್ರತಿಫಲನಕ್ಕೆ ಯೋಗ್ಯರಾಗುವಿರಿ (64:15) ಎಂಬರ್ಥದ ಮಾತುಗಳು ಕುರಾನಿನಲ್ಲಿ ಸಿಗುತ್ತವೆ.

ಪಾಶ್ಚಾತ್ಯ ಅಥವಾ ಐರೋಪ್ಯ ದೇಶಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸುಮಾರು ಹದಿನಾರನೆಯ ಶತಮಾನದವರೆಗೂ ಮಾತಾಡಿರಲೇ ಇಲ್ಲ. ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಮಕ್ಕಳನ್ನು ಕಿರು ವಯಸ್ಕರಂತೆಯೇ ಕಾಣುವುದಿದ್ದು, ವಯಸ್ಕರ ಅಗತ್ಯಗಳು ಮಕ್ಕಳಿಗೂ ಸಿಗಬೇಕೆಂಬ ಧೋರಣೆಯಿಂದ ಇರುವಂತಹ ಹಕ್ಕುಗಳಲ್ಲ ಇಸ್ಲಾಂನಲ್ಲಿ ಇರುವುದು. ಬದಲಿಗೆ, ಮಕ್ಕಳನ್ನು ಅವರ ನೈಸರ್ಗಿಕ ಸ್ವಭಾವವಾದ ಮುಗ್ಧತೆ ಮತ್ತು ಮೃದುತ್ವವನ್ನು ಕಾಪಾಡುವಂತಹ ಹೊಣೆಯನ್ನು ಹಿರಿಯರಿಗೆ ಹೊರಿಸುವುದು. ಜೊತೆಗೆ ಇಸ್ಲಾಮಿನಲ್ಲಿ ಧಾರ್ಮಿಕವಾಗಿ ಮಹತ್ವವಿರುವ ನಿರ್ಣಾಯಕ ದಿನದಂದು ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದರ ಬಗ್ಗೆಯೂ ಈ ಹಿರಿಯರು ಉತ್ತರಿಸಬೇಕು ಎಂಬಷ್ಟು ಆದ್ಯತೆ ಉಂಟು.

ಮಕ್ಕಳು ಸ್ವತ್ತಲ್ಲ:-

ಇಸ್ಲಾಂನಲ್ಲಿ ಮಗುವೆಂದರೆ ಅದು ಪೋಷಕರ ಸ್ವತ್ತಲ್ಲ, ಅದು ದೇವರ ವಿಶ್ವಾಸವೇ ಮಾನವ ರೂಪದಲ್ಲಿ ಒದಗಿರುವಂತಹದ್ದು. ಹಾಗೆಯೇ ಗಂಡು ಮಗು ಅಥವಾ ಹೆಣ್ಣು ಮಗುವೆಂದು ಅಲ್ಲಾಹನ ಕೊಡುಗೆಯಲ್ಲಿ ತಾರತಮ್ಯ ಮಾಡುವಂತಿಲ್ಲ. ಮಾನವನು ತಾನು ನಿರ್ಧರಿಸಿದಂತೆ ಸೃಷ್ಟಿಸಲಾಗದ ಸಂತಾನವು ಅಲ್ಲಾಹನ ಕರುಣೆ ಮತ್ತು ಅನುಗ್ರಹವಲ್ಲದೇ ಮತ್ತಿನ್ನೇನು? ಅದನ್ನು ಪಡೆದ ಪೋಷಕರು ಆ ಸಂತಾನವನ್ನು ಅಲ್ಲಾಹನದೇ ಅನುಗ್ರಹದಿಂದ ನೋಡಿಕೊಳ್ಳುವ ಬಾಧ್ಯಸ್ಥರಾಗುವರು. ಇದು ಇಸ್ಲಾಂ ಧೋರಣೆ.

ಇಸ್ಲಾಂ ಉದಯವಾಗುವ ಸಮಯದಲ್ಲಿ ಮತ್ತು ಮುನ್ನ ಅರಬ್ಬರಲ್ಲಿ ಒಂದು ಅಮಾನವೀಯವಾದಂತಹ ಮಕ್ಕಳನ್ನು ಹತ್ಯೆ ಮಾಡುವಂತಹ ಆಚರಣೆಗಳಿದ್ದವು. ಅವಕ್ಕೆ ಕ್ಷಾಮವೋ, ದಾರಿದ್ರ್ಯವೋ ಕಾರಣವಾಗಿರುತ್ತಿತ್ತು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಜೀವಂತವಾಗಿಯೇ ಹೂತುಬಿಡುತ್ತಿದ್ದರು. ಈ ಅಜ್ಞಾನದ ಆಚರಣೆಯನ್ನು ಪ್ರವಾದಿ ಮಹಮದರು ಧಿಕ್ಕರಿಸುವುದೇ ಅಲ್ಲದೇ ಹೆಣ್ಣು ಮಕ್ಕಳೂ ಕೂಡ ಅಲ್ಲಾಹನ ಅನುಗ್ರಹವೇ ಹಾಗೂ ಆ ಮಕ್ಕಳನ್ನು ಮೌಲ್ಯಾಧಾರಿತವಾಗಿ ಬೆಳೆಸುವುದು ಒಂದು ಕರ್ತವ್ಯವೆಂದು ಪ್ರತಿಪಾದಿಸಿದರು. ಪ್ರವಾದಿ ಮಹಮದರು ಸ್ವಯಂ ಹೆಣ್ಣು ಮಕ್ಕಳ ತಂದೆಯಾಗಿದ್ದು, ಹೆಣ್ಣು ಮಕ್ಕಳ ಪೋಷಕರ ಉತ್ತಮ ಪ್ರತಿನಿಧಿಯಾಗಿ ನನಗೆ ತೋರುತ್ತಾರೆ. ಎಲ್ಲಾ ಮಕ್ಕಳೂ ಒಟ್ಟಾಗಿರುವಾಗ ತಂದಿರುವ ಹಣ್ಣನ್ನು (ಅಥವಾ ಕೊಡುಗೆಗಳನ್ನು) ಮೊದಲು ಹೆಣ್ಣು ಮಕ್ಕಳಿಂದ ಕೊಡಮಾಡು ಎನ್ನುವ ಮಾತು ಅವರಿಂದಲೇ.

ಹೆಣ್ಣು ಮಕ್ಕಳ ಪೋಷಕರ ಮೇಲೆ ಔದಾರ್ಯವಿರಲಿ

ಒಮ್ಮೆ ಒಬ್ಬಾಕೆಯು ಪ್ರವಾದಿಯವರ ಪತ್ನಿಯಾದ ಆಯಿಷಾರವರ ಬಳಿಗೆ ಬಂದಳು. ಅವಳ ಜೊತೆ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಆಕೆ ಭಿಕ್ಷೆ ಬೇಡಿದಳು. ಇವರ ಬಳಿ ಏನೂ ಇರದೇ ಬರಿಯ ಒಂದೇ ಒಂದು ಖರ್ಜೂರವಿರುತ್ತದೆ. ಆಗ ಅದನ್ನೇ ನೀಡಲಾಗಿ, ಆಕೆಯು ಅದನ್ನು ಎರಡು ಭಾಗ ಮಾಡಿ, ತಾನು ತಿನ್ನದೆಯೇ ಖರ್ಜೂರದ ಚೂರುಗಳನ್ನು ತನ್ನ ಎರಡು ಹೆಣ್ಣು ಮಕ್ಕಳಿಗೂ ತಿನ್ನಲು ಕೊಟ್ಟು ಅಲ್ಲಿಂದ ಹೊರಟು ಹೋದಳು. ಪ್ರವಾದಿ ಮಹಮದರು ಮನೆಗೆ ಮರಳಿದಾದ ಅವರ ಪತ್ನಿ ಇದನ್ನು ವಿವರಿಸಿದರು.

ಆಗ ಪ್ರವಾದಿ ಮಹಮದರು, “ಹೆಣ್ಣುಮಕ್ಕಳನ್ನು ಬೆಳೆಸುವ ಪರೀಕ್ಷೆಗೆ ಒಳಗಾಗಿರುವವರನ್ನು ಔದಾರ್ಯದಿಂದ ಕಾಣಬೇಕು. ಹೆಣ್ಣು ಮಕ್ಕಳ ಪೋಷಕರ ಬಗೆಗಿರುವ ಈ ಔದಾರ್ಯದ ಮನೋಭಾವ ನಿನ್ನನ್ನು ನರಕಾಗ್ನಿಯಿಂದ ರಕ್ಷಿಸುವುದು” ಎಂದು ಹೇಳುತ್ತಾರೆ. ಈ ಔದಾರ್ಯದ ಸಂಸ್ಕಾರವೇ ಮುಂದೆ ವರದಕ್ಷಿಣೆಯ ಬದಲಾಗಿ ವಧುದಕ್ಷಿಣೆಯ ಸಂಪ್ರದಾಯವಾಗಿದ್ದಿರಬಹುದೆಂದು ನನಗೆ ಅನ್ನಿಸುತ್ತದೆ.

ಅವರ ನೆರೆಹೊರೆಯಲ್ಲಿ ಮಗುವೊಂದು ಜನಿಸಿದಾಗ ಆಯಿಷಮ್ಮ ಹುಟ್ಟಿದ ಮಗುವು ಗಂಡೋ ಅಥವಾ ಹೆಣ್ಣೋ ಎಂದು ವಿಚಾರಿಸುತ್ತಿರಲಿಲ್ಲವಂತೆ. ಮಗುವು ಆರೋಗ್ಯವಂತವಾಗಿದೆಯೋ, ಸದೃಢವಾಗಿದೆಯೋ ಎಂದು ಕೇಳುತ್ತಿದ್ದರು. ಹೌದು ಎಂಬ ಉತ್ತರ ಬಂದಮೇಲೆ ಎಲ್ಲಾ ವಿಶ್ವಗಳ ಪ್ರಭುವಾದ ಅಲ್ಲಾನಿಗೆ ಕೃತಜ್ಞತಾ ಪೂರ್ವಕವಾಗಿ ಸ್ತುತಿಸುತ್ತಿದ್ದರು. ಅಂದರೆ ಗಂಡು ಹುಟ್ಟಿದರೆ ಊರಿಗೆಲ್ಲಾ ಹಾಲು ಖೀರು ಉಣಿಸಿ, ಹೆಣ್ಣು ಹುಟ್ಟಿದರೆ ಬೂಂದಿಯಲ್ಲೇ ಮನೆ ಮಂದಿ ನಾಮಕಾವಸ್ಥೆಯ ಆಚರಣೆಯನ್ನು ಮುಗಿಸುವ ಧೋರಣೆಯನ್ನು ಇದು ಖಂಡಿಸುತ್ತದೆ. ಯಾವ ಮಗುವಾದರೂ ಅಲ್ಲಾಹನಿಗೆ ಪ್ರಾರ್ಥನೆಯನ್ನು ಸಲ್ಲಿಸುವುದೇ, ತಹ್ನೀಕ್ ಮಾಡುವುದೇ. ತಹ್ನೀಕ್ ಎಂದರೆ ಹುಟ್ಟಿದ ಮಗುವಿನ ಬಾಯಲ್ಲಿ ಮೆದುವಾದ ಖರ್ಜೂರ ಅಥವಾ ಜೇನುತುಪ್ಪದಂತಹ ಸಿಹಿಯನ್ನು ಇಟ್ಟು ಪ್ರಾರ್ಥನೆ ಸಲ್ಲಿಸುವುದು.

ಅನಾಥ ಮಕ್ಕಳ ಹಕ್ಕುಗಳು:-

ಪ್ರವಾದಿ ಮಹಮದರು ಒಮ್ಮೆ ಹಬ್ಬದ ದಿನ ಪ್ರಾರ್ಥನೆಗೆಂದು ಸಮಯಕ್ಕೆ ಸರಿಯಾಗಿ ಈದ್‍ಗಾಗೆ ಹೋಗುತ್ತಿದ್ದರಂತೆ. ಮಾರ್ಗದಲ್ಲಿ ಒಬ್ಬ ಹುಡುಗ ಅಳುತ್ತಾ ನಿಂತಿದ್ದನ್ನು ಕಂಡು, ತಾವೇ ಅವನ ದುಃಖಕ್ಕೆ ಕಾರಣವನ್ನು ವಿಚಾರಿಸಿದರು. ಆಗ, ಆ ಹುಡುಗನು ತಂದೆ ತಾಯಿಗಳನ್ನು ಕಳೆದುಕೊಂಡ ಒಬ್ಬ ಅನಾಥನೆಂದು ತಿಳಿದು ಬಂದಿದ್ದಲ್ಲದೇ ಆತನಿಗೆ ಹಬ್ಬವನ್ನು ಆಚರಿಸಲು ಅನುಕೂಲವಿಲ್ಲದಿರುವುದನ್ನು ತಿಳಿದರು. ನಂತರ ನನ್ನನ್ನೇ ನಿನ್ನ ತಂದೆಯೆಂದು ತಿಳಿದು ಜೊತೆಗೆ ಬಾ ಎಂದು ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ತಮ್ಮ ಪತ್ನಿಗೆ ಆ ಮಗುವಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಯನ್ನು ತೊಡಿಸಲು ಹೇಳಿದರು. ಹಾಗೆ ತಯಾರಾದ ಮಗುವನ್ನು ತಮ್ಮ ಜೊತೆಗೆ ಈದ್ಗಾಗೆ ಕರೆದುಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿದರು. ಒಬ್ಬ ಅನಾಥ ಮಗುವಿಗೆ ಹಬ್ಬದ ಸಂತಸವನ್ನು ನೀಡಲು ಮಹಮದರು ಈದ್ಗಾ ಮಾರ್ಗವನ್ನು ಬಿಟ್ಟು ಮನೆಯ ಮಾರ್ಗ ತುಳಿಯಲು ಸಮಯ ನೀಡಿದ್ದೇ ಅಲ್ಲದೇ, ನಂತರ ತಮ್ಮ ಪ್ರಾರ್ಥನೆಯನ್ನು ಆ ಹುಡುಗನೊಂದಿಗೆ ನೆರವೇರಿಸಿದರು.

ಎಲ್ಲಾ ಮಕ್ಕಳನ್ನೂ ಪ್ರೇಮಭಾವದಿಂದ ನೋಡಲು ಪ್ರೇರೇಪಿಸುವ ಮಹಮದರು, ಅನಾಥ ಮಕ್ಕಳ ಎದುರಿನಲ್ಲಿ ತಮ್ಮ ಮಕ್ಕಳನ್ನು ಮಾತ್ರ ಮುದ್ದಾಡುವುದು ಪಾಪ ಎಂದು ಹೇಳುತ್ತಾರೆ. ಅನಾಥ ಮಗುವಿನ ಮನಸ್ಸಿನಲ್ಲಿ ಕೊರತೆಯ ಮತ್ತು ನಿರಾಶೆಯ ನೋವು ಉಂಟಾಗಬಾರದೆಂಬ ಕಾಳಜಿ ಅಲ್ಲಿ. ಅನಾಥ ಮಕ್ಕಳಿಗೆ ಪ್ರೀತಿ, ಮಮತೆ ಮತ್ತು ಔದಾರ್ಯವನ್ನು ತೋರುವುದರಲ್ಲಿ ಕುರಾನ್ ಬಹಳ ಕಾಳಜಿ ತೋರುತ್ತದೆ. ಅವರನ್ನು ಕಠೋರವಾಗಿ ನಡೆಸಿಕೊಳ್ಳುವುದಾಗಲಿ, ಕಟು ಮಾತುಗಳನ್ನಾಗಲಿ ಆಡುವುದನ್ನು ಅದು ನಿಷೇಧಿಸುತ್ತದೆ. ಅನಾಥ ಮಕ್ಕಳ ಹಕ್ಕುಗಳನ್ನು ಕಾಪಾಡುವ ರಚನಾತ್ಮಕ ಧೋರಣೆಗಳನ್ನು ಹೊಂದಿರುವುದಲ್ಲದೇ, ಅಂತಹ ಮಕ್ಕಳಿಗೆ ಮಾಡುವಂತಹ ಸೇವೆಗಳನ್ನು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಪ್ರೋತ್ಸಾಹಿಸುತ್ತದೆ. ಅಷ್ಟೇಕೆ, ಕ್ರಿಸ್ತಶಕ 577ರಲ್ಲಿ ಮಹಮದರ ತಾಯಿ ಮರಣಿಸಿದರು. ಆಗ ಆರು ವರ್ಷದ ಮಹಮದ್ ಓರ್ವ ಅನಾಥ ಬಾಲಕ.

ಮಕ್ಕಳ ಗೆಳೆಯ ಮಹಮದ್ :-

ಪ್ರವಾದಿ ಮಹಮದರ ತೊಡೆಯ ಮೇಲೆ, ಮೈ ಮೇಲೆ, ಗಡ್ಡದ ಜೊತೆ ಮಕ್ಕಳು ತಮಗಿಷ್ಟ ಬಂದಂತೆ ಆಡಬಿಡುತ್ತಿದ್ದರು.  ಅವರ ಆಟಕ್ಕೆ ಭಂಗವಾಗುವ ರೀತಿಯಲ್ಲಿ ಎಂದೂ ತಡೆಯೊಡ್ಡುತ್ತಿರಲಿಲ್ಲ. ಅವರ ಮಗಳ ಪುಟ್ಟ ಮಕ್ಕಳಾದ ಹಸನ್ ಮತ್ತು ಹುಸೇನರು ನಮಾಜಿಗೆ ಬಾಗಿದಾಗ ಬೆನ್ನನ್ನು ಏರಿ, ಅವರು ಮತ್ತೆ ತಾವಾಗೇ ಇಳಿಯುವವರೆಗೂ ತಾವು ಮುಂದಿನ ಭಂಗಿಗೆ ಹೋಗದೇ ಹಾಗೇ ಇದ್ದದ್ದನ್ನು ಇಲ್ಲಿ ಸ್ಮರಿಸಬಹುದು.

ಮಕ್ಕಳ ವಿಷಯದಲ್ಲಿ ನೋವು ಮತ್ತು ನಲಿವು; ಈ ಎರಡನ್ನೂ ಅನುಭವಿಸಿದ್ದರು ಪ್ರವಾದಿ ಮಹಮದರು. ಅವರಿಗೆ ಏಳು ಮಕ್ಕಳು. ಮೂರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು. ಅವರ ಎಲ್ಲಾ ಗಂಡು ಮಕ್ಕಳು ತಮ್ಮ ಎಳೆತನದಲ್ಲಿಯೇ ಮರಣಿಸಿ, ಬರಿಯ ಹೆಣ್ಣು ಮಕ್ಕಳಷ್ಟೇ ಉಳಿದಿದ್ದರು. ಕಣ್ಣ ಮುಂದೆ ಸತ್ತ ಮಕ್ಕಳ ಶೋಕಿತ ತಂದೆಯಾಗಿಯೂ ಮಹಮದರಿಗೆ ಅನುಭವವಿರುವುದರಿಂದ ಮಕ್ಕಳ ಕುರಿತಾದ ಅವರ ನಿಲುವುಗಳಲ್ಲಿ ಗಾಢತೆ ಇತ್ತು. ಹಾಗೆ ಅವರಿಗೆ ಮಕ್ಕಳೊಂದಿಗೆ ನಲಿವು ಪಡೆವಲ್ಲಿ ನಾಲ್ಕು ಹೆಣ್ಣು ಮಕ್ಕಳು ಮಾತ್ರವಲ್ಲದೇ, ಓರ್ವ ದತ್ತು ಪುತ್ರನೂ, ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮೊಮ್ಮಕ್ಕಳು ಇದ್ದು ಮಕ್ಕಳೊಡನೆಯ ಅವರ ಸಾಂಗತ್ಯಕ್ಕೆ ಅನುಭವದ ಕಣಜ ಕಟ್ಟಿದ್ದರು.

ಮಹಮದರು ಹುಸೇನನ ಬೆನ್ನಟ್ಟಿ ಅವನ ಹಿಡಿಯುವಂತಹ ಜೂಟಾಟ ಆಡುತ್ತಿದ್ದರು. ಅದರಂತೆಯೇ ಮೊಮ್ಮಗಳನ್ನು ಹೆಗಲ ಮೇಲೇರಿಸಿಕೊಂಡೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ಇತರ ಮಕ್ಕಳೊಂದಿಗೂ ಮನಸೋಯಿಚ್ಛೆ ಆಡುತ್ತಾ ಸ್ನೇಹದಿಂದ ವರ್ತಿಸುತ್ತಿದ್ದರು. ಯಾವುದೇ ಧರ್ಮದ ಮಕ್ಕಳಾದರೂ ಅವರನ್ನು ಆದರಿಸುತ್ತಿದ್ದ, ಜ್ವರ ಅಥವಾ ತೊಂದರೆಗೆ ಒಳಗಾದಾಗ ಹೋಗಿ ನೋಡುವ ಮೂಲಕ ಕಾಳಜಿ ತೋರುತ್ತಿದ್ದ ಉಲ್ಲೇಖಗಳಿವೆ. ಒಮ್ಮೆ ಅವರದೇ ಮೊಮ್ಮಗುವಿಗೆ ಮುತ್ತು ಕೊಡಲು ಹೋದಾಗ ಮಗುವು ಅದಕ್ಕೆ ಒಪ್ಪದೇ ತನ್ನ ತಾತನನ್ನೇ ಗದರಿಕೊಂಡಿತಂತೆ. ಆಗ ಮಹಮದರು, “ನಾನು ಏನು ಮಾಡಲಿ, ದೇವರು ನಿನ್ನ ಮಾನವ ಭಾವನೆಗಳ ಹೃದಯವನ್ನು ಕಸಿದಿಟ್ಟುಕೊಂಡಿರಲು” ಎಂದು ಪ್ರತಿಕ್ರಿಯಿಸುವ ಮೂಲಕ ದೇವರಿಗೆ ಮಕ್ಕಳು ಬಲು ಪ್ರಿಯರಾದವರೆಂಬ ಯೇಸುವಿನ ಮಾತನ್ನು ನೆನಪಿಸುತ್ತಾರೆ. ಯಾವುದೋ ಮಗುವಿನ ಪ್ರೀತಿಯ ಬುಲ್ ಬುಲ್ ಹಕ್ಕಿಯು ಸತ್ತು ಹೋದಾಗ, ತಾವೂ ಅದನ್ನು ಗಂಭೀರವಾಗಿ ಪರಿಗಣಿಸಿ ಮಗುವನ್ನು ಸಂತೈಸುತ್ತಾರೆ.

ಎಲ್ಲಾ ಮಕ್ಕಳಿಗೂ ಸಮಾನತೆ :-

ಎಲ್ಲಾ ಮಕ್ಕಳನ್ನೂ ಸಮವಾಗಿ ನೋಡಬೇಕು ಎನ್ನುವಾಗ ಕುರುಡು, ಅಂಗವೈಕಲ್ಯದಂತಹ ಯಾವುದಾದರೂ ದೈಹಿಕ ನ್ಯೂನ್ಯತೆಗೆ ಒಳಗಾಗಿರುವ ಮಗುವನ್ನು ವಿಶೇಷ ಕಾಳಜಿಯನ್ನು ತೋರಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಸಮಾನ ದೃಷ್ಟಿಯೆಂಬುದು ಚೌಕಟ್ಟಿಗೆ ಸಿಕ್ಕಿ ಪೆಡಸಾಗುವುದಕ್ಕೆ ಬಿಡದೇ, ಅಗತ್ಯ ಮತ್ತು ಅನಿವಾರ್ಯತೆಗಳನ್ನು ಗಮನಿಸುವಂತಹ ಪ್ರಜ್ಞಾವಂತಿಕೆಯ ಬಗ್ಗೆಯೂ ಕೂಡ ವಿವೇಚಿಸುತ್ತದೆ. ಯಾವ ಮಗುವಿಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಬೇಕಾಗುತ್ತದೆಯೋ ಅದನ್ನೂ ಸಲಿಲತೆಯಿಂದ ಗಮನಿಸಲು ತಿಳಿಸುತ್ತದೆ. ಒಂದು ವೇಳೆ ಮಲ ಮಕ್ಕಳಾದರೂ ಕೂಡ ಅವರು ತನ್ನ ಮಲ ತಂದೆ ಅಥವಾ ತಾಯಿಯಿಂದ ಶೋಷಿತರಾಗದಿರುವಂತೆ ಅವರ ಹಕ್ಕನ್ನೂ ಕೂಡಾ ರಕ್ಷಿಸುತ್ತದೆ. ಆರ್ಥಿಕವಾಗಿ ಸ್ವತ್ತುಗಳನ್ನು ವಿಭಜಿಸುವಾಗಲೂ ಕೂಡ ಸಮಪಾಲನ್ನು ಅದು ಸೂಚಿಸುತ್ತದೆ. ಇಸ್ಲಾಂನಲ್ಲಿ ಮಕ್ಕಳ ಮೇಲೆ ಹಿರಿಯರ ಅಥವಾ ಪೋಷಕರ ಹಕ್ಕಿದೆ, ಅಂದರೆ ಅದು ಅವರನ್ನು ಎಂದಿಗೂ ಅಪಮಾನಗೊಳಿಸುವ ರೀತಿಯಲ್ಲಾಗಲಿ, ಕೆಟ್ಟದಾಗಿ ನಡೆಸಿಕೊಳ್ಳುವ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಖಂಡಿತ ನೀಡಿಲ್ಲ. ಹೀಗೆ ಧಾರ್ಮಿಕವಾಗಿಯೇ ಮಕ್ಕಳ ಹಕ್ಕನ್ನು ರಕ್ಷಣೆ ಮಾಡುವ ಹೊಣೆಯನ್ನು ಇಸ್ಲಾಂ ಹೊತ್ತುಕೊಂಡಿದೆ.

“ಒಬ್ಬ ತಂದೆಯು ಉತ್ತಮ ಶಿಕ್ಷಣಕ್ಕಿಂತ ಇನ್ನೇನು ತನ್ನ ಮಗುವಿಗೆ ನೀಡಬೇಕು?” ಎಂದು ಕೇಳುವ ಮಹಮದರು “ಯಾರು ತಮ್ಮ ನಡವಳಿಕೆಯಿಂದ ಮಗುವು ತಮಗೇ ಅವಿಧೇಯವಾಗಿ ನಡೆದುಕೊಳ್ಳುವಂತೆ ಮಾಡುತ್ತಾರೋ ಆ ತಂದೆ ತಾಯಿಗಳು ಅಲ್ಲಾಹ್‍ನಿಂದಲೇ ಶಾಪಗ್ರಸ್ತರು” ಎಂದು ಉದ್ಗರಿಸುವುದರ ಮೂಲಕ, ಮಕ್ಕಳು ಕೆಟ್ಟದಾಗಿ ನಡೆದುಕೊಳ್ಳಲು ಕಾರಣರು ಪೋಷಕರಾಗಿರುತ್ತಾರೆ ಎಂದು ಸೂಚ್ಯವಾಗಿ ತಿಳಿಸುತ್ತಾ, ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಪ್ರೇರೇಪಿಸುತ್ತಾರೆ.

ಯಾವ ಪೋಷಕರು ಮಕ್ಕಳ ಹಕ್ಕನ್ನು ಕಸಿದುಕೊಳ್ಳುತ್ತಾರೋ, ಸರಿಯಾದ ಶಿಕ್ಷಣ, ಪೋಷಣೆ ಇತ್ಯಾದಿಗಳನ್ನು ಕೊಡುವುದಿಲ್ಲವೋ, ಮಕ್ಕಳ ನೈತಿಕ ಸ್ವಭಾವವನ್ನು ರೂಪಿಸಲು ಅವಗಣಿಸುತ್ತಾರೋ, ಮಕ್ಕಳ ಸಾಮರ್ಥ್ಯಕ್ಕೆ ಮೀರಿ ಅವರ ಮೇಲೆ ಒತ್ತಡಗಳನ್ನು ಹೇರುತ್ತಾರೋ, ಮಕ್ಕಳ ಮೇಲೆ ಸರ್ವಾಧಿಕಾರವನ್ನು ಸ್ಥಾಪಿಸುತ್ತಾರೋ; ಅವರು ಮಕ್ಕಳು ತಮ್ಮ ವಿರುದ್ಧವೇ ಬಂಡಾಯವೇಳುವಂತೆ ಮಾಡುವ ಪೋಷಕರು. ಅವರು ದೇವರಿಂದಲೂ ಶಾಪಗ್ರಸ್ತರು! ಮಕ್ಕಳ ಅನಪೇಕ್ಷಿತ ವರ್ತನೆಗೆ ಪೋಷಕರೇ ಕಾರಣ ಎಂಬುದನ್ನು ಇಸ್ಲಾಂ ನೇರವಾಗಿಯೇ ಹೇಳುತ್ತದೆ. ಅದೇ ಮಕ್ಕಳ ಮನೋವಿಜ್ಞಾನವೂ ಇಂದು ಹೇಳುತ್ತಿರುವುದು.

ಒಟ್ಟಾರೆ ಇಸ್ಲಾಂ ಸಂಸ್ಕೃತಿಯ ಪ್ರಕಾರ ಪ್ರತಿಯೊಂದು ಮಗುವೂ ಕೂಡ ಗೌರವ, ಪ್ರೇಮ ಮತ್ತು ಔದಾರ್ಯಕ್ಕೆ ಅರ್ಹವಾದುದು.

(ಮುಂದುವರಿಯುವುದು)