ಸನ್ಮಾರ್ಗ ವಾರ್ತೆ
ದುಬೈ, ಫೆ. 28: ಯುಎಇಯಲ್ಲಿ ಇನ್ನೂ ಆರು ಮಂದಿ ಕೊರೊನಾ ವೈರಸ್‍ಗೆ ಹೊಸದಾಗಿ ತುತ್ತಾಗಿದ್ದಾರೆ, ಇದರೊಂದಿಗೆ ಇಲ್ಲಿ ಕೊರೊನಾ ಇರುವವರ ಸಂಖ್ಯೆ ಹತ್ತೊಂಬತ್ತಕ್ಕೇರಿಕೆಯಾಗಿದೆ. ಈ ನಡುವೆ ರೋಗ ಕಂಡು ಬಂದಿದ್ದ ಇಬ್ಬರು ಚೀನದವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇರಾನಿನಿಂದ ಬಂದ ಆರು ಮಂದಿಗೆ ಹೊಸದಾಗಿ ರೋಗ ಇರುವುದು ದೃಢಪಟ್ಟಿದ್ದು ಇವರಲ್ಲಿ ನಾಲ್ವರು ಇರಾನಿಯರು, ಒಬ್ಬ ಚೀನದ ಪ್ರಜೆ. ಇನ್ನೊಬ್ಬ ಇರಾನಿನಿಂದ ಯುಎಇಗೆ ಬಂದ ಬಹ್ರೈನ್ ಪ್ರಜೆ. ದೇಶದಲ್ಲಿರುವ ಅತ್ಯಾಧುನಿಕ ಸ್ಕ್ರೀನಿಂಗ್ ವ್ಯವಸ್ಥೆಯ ಮುಖಾಂತರ ರೋಗ ತಪಾಸಣೆಗೆ ಗುರಿಪಡಿಸಿ ರೋಗ ಪೀಡಿತರನ್ನು ಕಂಡು ಹಿಡಿಯಲಾಯಿತು ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.
ಕೊರೊನಾ ಪ್ರತಿರೋಧಕ್ಕೆ ಶಕ್ತ ಕ್ರಮ ಜರಗಿಸಲು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಕಾರ್ಯಪ್ರವೃತ್ತವಾಗಿವೆ. ಪ್ರಯಾಣ ನಿಯಂತ್ರಣವಿರುವ ಜಿಸಿಸಿ ಪ್ರಜೆಗಳಿಗೆ ಗುರುತು ಚೀಟಿ ಉಪಯೋಗಿಸಿ ಇತರ ದೇಶಗಳಿಗೆ ಹೋಗುವ ಅನುಮತಿಯನ್ನು ಯುಎಇ ರದ್ದುಪಡಿಸಿದೆ. ಪಾಸ್‍ಪೋರ್ಟ್ ಉಪಯೋಗಿಸಿ ಮಾತ್ರವೇ ಗಡಿ ದಾಟಬಹುದು. ಗುರುತು ಚೀಟಿ ಉಪಯೋಗಿಸಿ ದೇಶದಿಂದ ಹೊರಗೆ ಹೋದವರಿಗೆ ಮರಳಿ ಬರಲು ಅನುಮತಿ ಸಿಗಲಿದೆ. ರೋಗ ಹರಡುತ್ತಿರುವ ಪರಿಸ್ಥಿತಿಯಲ್ಲಿ ತಾತ್ಕಾಲಿಕ ನಿಯಂತ್ರಣ ಇದೆಂದು ಫೆಡರಲ್ ಅಥಾರಿಟಿ ಫಾರ್ ಐಡಂಟಿಟಿ ಆಂಡ್ ಸಿಟಿಝನ್ ಅಧಿಕಾರಿಗಳು ಸ್ಪಷ್ಟಪಡಿಸಿದರು.












