ಮಂಗಳೂರು ಗೋಲಿಬಾರ್: ವಿಚಾರಣೆಗೆ ಹಾಜರಾದ ಡಿಸಿಪಿ ಅರುಣಾ೦ಶುಗಿರಿ ಮತ್ತು ಕಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್; ತನಗೆ ಜೀವ ಬೆದರಿಕೆಯಿದೆ ಎಂದ ಕಾಝಿ

0
1336

ಸನ್ಮಾರ್ಗ ವಾರ್ತೆ

ಮಂಗಳೂರು; ಮಾ. 9- ಡಿಸೆಂಬರ್ 19 ರಂದು ನಗರದಲ್ಲಿ ನಡೆದ ಪ್ರತಿಭಟನೆ ಹಾಗೂ ಗೋಲಿಬಾರ್ ಗೆ ಸಂಬಂಧಿಸಿ ಸೋಮವಾರ ಮೆಜಿಸ್ಟ್ರಿಯಲ್ ವಿಚಾರಣೆಗೆ ಹಾಜರಾದ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾ೦ಶುಗಿರಿ ಅವರು ವಿಚಾರಣಾಧಿಕಾರಿ ಬಿ ಜಗದೀಶ್ ಅವರಿಗೆ 38 ದಾಖಲೆಗಳನ್ನು ಸಲ್ಲಿಸುವ ಮೂಲಕ ತನ್ನ ಅಭಿಪ್ರಾಯವನ್ನು ಮಂಡಿಸಿದರು.

ನಾನು ಡಿಸೆಂಬರ್ 19 ರಂದು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ. ಅನುಮತಿಯಿಲ್ಲದೆ ಪ್ರತಿಭಟನೆಗೆ ಪ್ರಯತ್ನಿಸಿದ ಜನರನ್ನು ನಿಯಂತ್ರಿಸುತ್ತಿದ್ದೆ. ಪ್ರತಿಭಟನಾಕಾರರು ಗಲಭೆಗೆ ಇಳಿದರು ಮತ್ತು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಇದರಿಂದಾಗಿ 78 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಾಯಗೊಂಡರು. ಪ್ರತಿಭಟನೆ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ವಿಚಾರಣಾಧಿಕಾರಿಯ ಮುಂದೆ ಹಾಜರಾಗಿದ್ದು ಘಟನೆಯ ಕುರಿತಂತೆ ಲಿಖಿತ ಹೇಳಿಕೆ ನೀಡಿದ್ದಾರೆ. ಎಸ್ ಕೆ ಎಸ್ಸೆಸೆಫ್ ವತಿಯಿಂದ ಸಿಎಎ ವಿರೋಧಿಸಿ ಪ್ರತಿಭಟನೆ ಆಯೋಜಿಸಲಾಗಿತ್ತಾದರೂ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ ನಂತರ ರದ್ದುಗೊಳಿಸಲಾಗಿತ್ತು. ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಆದ್ದರಿಂದ, ನಮಗೂ ಡಿಸೆಂಬರ್ 19 ರ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಕಾಝಿಹೇಳಿದ್ದಾರೆ. ಗಲಭೆಯ ಬಳಿಕ ನನ್ನನ್ನು ಕೆಲವರು ದ್ವೇಷಿಸಿದ್ದು, ನನ್ನ ಕೊಲೆಗೆ ಯತ್ನ ನಡೆದಿವೆ. ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ.

ಒಟ್ಟು 30 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಚಾರಣೆಗೆ ಹಾಜರಾಗಿದ್ದು, ಮಾರ್ಚ್ 12ರಂದು ಮತ್ತೆ ವಿಚಾರಣೆ ನಡೆಯಲಿದೆ. ಆದಿನ ಪೊಲೀಸ್ ಕಮಿಷನರ್ ಸೇರಿದಂತೆ ಹಲವರು ವಿಚಾರಣೆ ಹಾಜರಾಗಲಿದ್ದಾರೆ ಎಂದು ವಿಚಾರಣಾಧಿಕಾರಿ ಜಗದೀಶ್ ಹೇಳಿದ್ದಾರೆ.