ಸನ್ಮಾರ್ಗ ವಾರ್ತೆ
ಬೆಂಗಳೂರು, ಮಾ. 28- ಕೊರೋನಾ ವೈರಸ್ ದೇಶಾದ್ಯಂತ ಆತಂಕವನ್ನು ಸೃಷ್ಟಿಸಿರುವ ಸಂದರ್ಭದಲ್ಲಿ ಈ ವೈರಸ್ಸನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಕ್ಕೆ ಹೊರಟಿರುವ ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಮುಖ್ಯಮಂತ್ರಿಗಳಿಗೆ, ಪತ್ರಿಕಾ ಸಂಪಾದಕರಿಗೆ ಮತ್ತು ಪ್ರೆಸ್ ಕೌನ್ಸಿಲ್ ಗೆ ದೂರು ನೀಡಲಾಗುವುದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್ ಕೆ ಎಂ ಶಾಫಿ ಸಅದಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕೊರೋನಾ ವಿಶ್ವಾದ್ಯಂತ ವ್ಯಾಪಿಸಿದೆ. ಮನುಷ್ಯನ ಧರ್ಮ ನೋಡಿ ಈ ವ್ಯಾಧಿ ಹೊರಡುತ್ತಿಲ್ಲ. ಎಲ್ಲಾ ಧರ್ಮ ವರ್ಗದವರಲ್ಲೂ ಈ ರೋಗ ಕಂಡು ಬಂದಿದೆ. ವಿಚಿತ್ರವೆಂದರೆ ಕನ್ನಡ ಪತ್ರಿಕೋದ್ಯಮದ ಕೆಲವರ ಮನಸ್ಥಿತಿ ಕೊರೋನಾವನ್ನೂ ಕೋಮುವಾದೀಕರಣ ಮಾಡಲು ಹೊರಟಿದೆ. ಸತ್ತವರೆಲ್ಲ ಒಂದೇ ಸಮುದಾಯದವರು ಎಂಬ ಮುಖಪುಟ ವರದಿಯನ್ನು ಪ್ರಕಟಿಸಿರುವ ಕನ್ನಡದ ಪ್ರಮುಖ ಪತ್ರಿಕೆಯೊಂದು ಈ ವೈರಸ್ ಕರ್ನಾಟಕದಲ್ಲಿ ಯಾವ ಧರ್ಮದಲ್ಲಿ ಹೆಚ್ಚು ಬಂದಿದೆ, ಯಾವ ಧರ್ಮದವರು ಹೆಚ್ಚು ಸತ್ತಿದ್ದಾರೆ, ಯಾವ ಧರ್ಮದವರಿಗೆ ಪೊಲೀಸರು ಹೆಚ್ಚುಪೆಟ್ಟು ಕೊಟ್ಟಿದ್ದಾರೆ ಎನ್ನುವ ಸುದ್ದಿಯೊಂದಿಗೆ ವಿಕೃತ ಮನೋಭಾವವನ್ನು ಪ್ರದರ್ಶಿಸಿದೆ. ಕೊರೋನಾ ಹರಡಿ ಎಂದು ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದ ಕಿಡಿಗೇಡಿಯೊಬ್ಬನ ನೀಚ ಕೃತ್ಯವನ್ನು ಈ ವರದಿಯೊಂದಿಗೆ ಜೋಡಿಸಿ ಇತರ ಸಮುದಾಯಗಳ ಮಧ್ಯೆ ಮುಸ್ಲಿಂ ಸಮುದಾಯವನ್ನು ತಪ್ಪಿತಸ್ಥ ವಿಭಾಗವನ್ನಾಗಿ ಚಿತ್ರೀಕರಿಸುವ ಪ್ರಯತ್ನವೂ ನಡೆದಿದೆ. ಮನುಷ್ಯ ವರ್ಗದ ಭಾವುಕ ಕ್ಷಣಗಳನ್ನು ಕೋಮು ವೈಷಮ್ಯಕ್ಕೆ ತಿರುಗಿಸುವ ಈ ಹೀನ ಕೃತ್ಯ ಖಂಡನೀಯ. ಇದು ಅಮಾನವೀಯ ಮತ್ತು ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಇಡೀ ಮುಸ್ಲಿಂ ಸಮುದಾಯದ ಭಾಗಿಯಾಗಿದ್ದು, ಚರಿತ್ರೆಯಲ್ಲೇ ಮೊದಲ ಬಾರಿ ಮುಸ್ಲಿಮರು ಮಸೀದಿಗಳಲ್ಲಿ ನಮಾಜ್ ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮುಸ್ಲಿಮರು ನಮಾಜ್ ಮಾಡಲು ಮಸೀದಿಗೆ ಹೋಗಬೇಕಾಗಿಲ್ಲ ಎಂಬ ತತ್ವವನ್ನು ಅತ್ಯಂತ ಯಶಸ್ವಿಯಾಗಿ ಮುಸ್ಲಿಂ ಸಮುದಾಯದ ಮಧ್ಯೆ ಬಿತ್ತರಿಸಲು ಮುಸ್ಲಿಂ ಪಂಡಿತರಿಗೆ ಸಾಧ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಕೂಡ ಮುಸ್ಲಿಮರ ಹೋರಾಟವನ್ನು ಶ್ಲಾಘಿಸಿದ್ದಾರೆ ಎಂದಿರುವ ಶಾಫಿ ಸಅದಿಯವರು, ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ, ಕೋಮುವಾದಿಗಳ ಕುಪ್ರಯತ್ನವನ್ನು ಸಫಲಗೊಳಿಸಲು ರಾಜ್ಯದ ಕನ್ನಡಿಗರು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.












