ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕರ ಮೇಲೆ ಹಲ್ಲೆ ಪ್ರಕರಣ: ಪೋಲೀಸ್ ಅಮಾನತು

0
1099

ಸನ್ಮಾರ್ಗ ವಾರ್ತೆ

ಉಪ್ಪಿನಂಗಡಿ, ಮಾರ್ಚ್ 31- ಕುಕ್ಕೆ ಸುಬ್ರಹ್ಮಣ್ಯದ. ಆದಿ ಸುಬ್ರಹ್ಮಣ್ಯದ ಅರ್ಚಕರಾದ ಶ್ರೀನಿವಾಸ್ ರು ಶನಿವಾರ ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಲಾಠಿಯಿಂದ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಸಂಶಿ ಎನ್ನುವ ಕಾನ್ಸ್ ಟೇಬಲ್ ಅವರನ್ನು ದ ಕ ಜಿಲ್ಲಾ ಎಸ್ ಪಿಯವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸ್ ರು ದೇವಳದ ಕೀ ಸಹಿತ ತೆರಳುತ್ತಿದ್ದಾಗ ಕಾನ್ಸ್ ಟೇಬಲ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿತ್ತು. ಅರ್ಚಕರನ್ನು ಬೈಯ್ದದಲ್ಲದೆ , ಅರ್ಚಕರು ತಾನು ಸಂಜೆಯ ಪೂಜೆಗಾಗಿ ಹೋಗುತ್ತಿರುವುದಾಗಿ ದೇವಳದ ಕೀ ತೋರಿಸಿದರೂ ಅವರು ಪರಿಗಣಿಸಲಿಲ್ಲ ಮತ್ತು ಲಾಠಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಇವರು ದೇವಳದ ಮುಖ್ಯ ಅರ್ಚಕರಾಗಿದ್ದು, ತನ್ನ ದೈನಂದಿನ ಪೂಜಾ ಕಾರ್ಯ ನಡೆಸಲು ಹೊರಟಿದ್ದರು. ಅಲ್ಲದೆ, ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿ ಸ್ಥಳೀಯರೇ ಆಗಿದ್ದು ಗುರುತು ಇದ್ದರೂ ಈ ರೀತಿ ವರ್ತಿಸಿದ್ದಾರೆ ಎಂದೂ ಹೇಳಲಾಗಿತ್ತು. ಮಾತ್ರವಲ್ಲ, ಈ ಘಟನೆಯನ್ನು ವಿಪ್ರ ಸಂಘಟನೆ ಖಂಡಿಸಿತ್ತು. ಹಾಗೆಯೇ, ಕಾನ್ಸ್ ಟೇಬಲ್ ಅವರನ್ನು ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರನ್ನು ಮತ್ತು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿತ್ತು.

ಇದೀಗ ಈ ಬಗ್ಗೆ ಬಂಟ್ವಾಳ ಪೊಲೀಸ್ ಉಪ ವಿಭಾಗಾಧಿಕಾರಿಯಿಂದ ವರದಿಯನ್ನು ಪಡೆದು ಪರಿಶೀಲಿಸಿರುವುದಾಗಿಯೂ ಮೇಲ್ನೋಟಕ್ಕೆ ಪೊಲೀಸ್ ದುರ್ವರ್ತನೆ ಸ್ಪಷ್ಟವಾಗಿರುವುದಾಗಿಯೂ ಹೇಳಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಶಂಕರ್ ಸಂಶಿ ಅವರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಇಲಾಖಾ ತನಿಖೆಯನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.