ಸನ್ಮಾರ್ಗ ವಾರ್ತೆ
ಮಂಗಳೂರು, ಮಾರ್ಚ್ 29- ಬಂದ್ ನಿಂದ ನಿಂದ ಇನ್ನೇನು ಮುಕ್ತಿ ಸಿಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಕಾಯುತ್ತಿರುವ ಸಂದರ್ಭದಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಬಂದ್ ಅನ್ನು ಇನ್ನೊಂದು ದಿನಕ್ಕೆ ವಿಸ್ತರಿಸುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಮಾರ್ಚ್ ಮೂವತ್ತರ ಸೋಮವಾರದಂದು ಕೂಡ ಸಂಪೂರ್ಣ ಬಂದ್ ಇರಲಿದೆ ಎಂದು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಿದ್ದರಿಂದ ನಾಗರಿಕರು ಸೋಮವಾರದಂದು ಬಂದ್ ನಿಂದ ಮುಕ್ತಿಯನ್ನು ನಿರೀಕ್ಷಿಸಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,ಕೊರೋನಾ ಹರಡದಂತೆ ಕಠಿಣ ಕ್ರಮ ಕೈಗೊಳ್ಳುವುದು ಸದ್ಯದ ಅಗತ್ಯವಾಗಿದ್ದು ಸೋಮವಾರವೂ ಈ ಬಂದ್ ಅನ್ನು ವಿಸ್ತರಿಸಿದ್ದೇವೆ. ಆದರೆ ಮಾರ್ಚ್ 31ರ ಮಂಗಳವಾರದಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಗತ್ಯದ ಸಾಮಾನುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. ದಿನಸಿ ಅಂಗಡಿಗಳು ಮಂಗಳವಾರ ತೆರೆಯಲಿದ್ದು ಕುಟುಂಬದ ಒಬ್ಬ ಮಾತ್ರ ಬಂದು ಅಗತ್ಯದ ವಸ್ತುಗಳನ್ನು ಖರೀದಿಸಬೇಕು. ಯಾರಾದರೂ ದಿನಸಿ ಅಂಗಡಿಯ ಮಾಲಕರು ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲು ಮಾಡುವುದು ಗೊತ್ತಾದರೆ ಅವರ ಲೈಸನ್ಸನ್ನು ರದ್ದುಪಡಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ಎರಡು ತಿಂಗಳ ಮುಂಗಡ ಪಡಿತರ ನೀಡುವುದಕ್ಕಾಗಿ ಏಪ್ರಿಲ್ 2ರಿಂದ ವ್ಯವಸ್ಥೆ ಮಾಡಲಾಗುತ್ತದೆ. ಬೆಳಿಗ್ಗೆ ಏಳರಿಂದ ರಾತ್ರಿ ಎಂಟು ಗಂಟೆಯವರೆಗೆ ಪಡಿತರ ನೀಡುವ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.












