ನಾವು ಮುಸ್ಲಿಮರು, ನಮ್ಮನ್ನು ಮುಟ್ಟಿದರೆ ನಿಮಗೆ ಕೊರೋನಾ ಬರುತ್ತದೆ ಎಂದು ಬೆದರಿಸಿ ತಪ್ಪಿಸಿಕೊಂಡಿದ್ದ ಹಿಂದೂ ಯುವಕರ ಬಂಧನ: ಸುಳ್ಳು ಹೇಳಿಕೆ ಕೊಟ್ಟಿದ್ದ ತಹಶೀಲ್ದಾರ್ ವಿರುದ್ಧ ದೂರು, ವೀಡಿಯೊ

0
12254

ಸನ್ಮಾರ್ಗ ವಾರ್ತೆ

ಕೆ ಆರ್ ಪೇಟೆ, ಮಂಡ್ಯ, ಏಪ್ರಿಲ್ 10, ಕೋರೋನಾ ಸೋಂಕನ್ನು ಮುಸ್ಲಿಂ ಯುವಕರು ಹಬ್ಬಿಸುತ್ತಿದ್ದಾರೆ ಅನ್ನುವ ಸುಳ್ಳನ್ನು ಹರಡುವುದಕ್ಕಾಗಿ ಯುವಕರು ಮಾಡಿದ ಪ್ರಯತ್ನವನ್ನು ಪೊಲೀಸರು ಬಯಲು ಮಾಡಿದ್ದು ಮೂವರು ಹಿಂದೂ ಯುವಕರನ್ನು ಬಂಧಿಸಿದ್ದಾರೆ.

ಆರಂಭದಲ್ಲಿ ತಹಸೀಲ್ದಾರ್ ಶಿವಮೂರ್ತಿ ಅವರು ಕೂಡ ಮಾಧ್ಯಮಗಳೊಂದಿಗೆ ಮಾತನಾಡಿ ನಾಲ್ಕು ಮಂದಿ ಮುಸ್ಲಿಂ ಯುವಕರು ತಮಗೆ ಕೊರೋನಾ ಇದೆ ಮುಟ್ಟಿದರೆ ನಿಮಗೂ ಹಬ್ಬಿಸುತ್ತೇವೆ ಎಂದು ಬೆದರಿಸಿ ಚೆಕ್ ಪೋಸ್ಟ್ನಲ್ಲಿ ಸಿಬ್ಬಂದಿಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಅದು ಮಂಡ್ಯದಲ್ಲಿ ದೊಡ್ಡ ಸುದ್ದಿಯಾಗಿ ಜನರು ಮುಸ್ಲಿಮರನ್ನು ದ್ವೇಷಿಸುವ ಒಂದು ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು. ಆದರೆ ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಅವರು ಮುಸ್ಲಿಮರಲ್ಲ ಅವರು ಹಿಂದೂಗಳು ಅನ್ನೋದು ಗೊತ್ತಾಗಿ ಅವರನ್ನು ಬಂಧಿಸಿದ್ದಾರೆ. ತಹಶೀಲ್ದಾರರು ತನಿಖೆ ನಡೆಸದೇ ಏಕಾ ಏಕಿ ಮುಸ್ಲಿಂ ಯುವಕರು ಎಂದು ಉಲ್ಲೇಖಿಸಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದೇವೇಳೆ,  ತಹಶೀಲ್ದಾರ್ ರು ಮುದ್ರಿತ ಹೇಳಿಕೆ ಬಿಡುಗಡೆ ಗೊಳಿಸಿದ್ದು, ಸತ್ಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಘಟನೆ ಹೀಗಿದೆ

  1. ಕೆ ಆರ್ ಪೇಟೆ ತಾಲೂಕಿನ ತೆಂಡೇಕೆರೆ ಬಳಿ ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್‍ಪೋಸ್ಟ್ನಲ್ಲಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ನಮಗೆ ಕೊರೊನಾ ಇದೆ ಮುಟ್ಟಿದ್ರೆ ನಿಮಗೂ ಬರುತ್ತದೆ ಎಂದು ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ.ಆರ್.ಪೇಟೆ ಸಿಪಿಐ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಎಸ್‍ಐ ಲಕ್ಷ್ಮಣ್ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ತಾಲೂಕಿನ ಬಳ್ಳೇಕೆರೆ ಗ್ರಾಮದ ಮಹೇಶ್, ಅಭಿಷೇಕ್ ಮತ್ತು ಶ್ರೀನಿವಾಸ್ ಎಂಬ ಯುವಕರನ್ನು ಬಳ್ಳೇಕೆರೆ ಗ್ರಾಮದಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ತಾಲೂಕಿನ ಜನತೆಯಲ್ಲಿ ಉಂಟಾಗಿದ್ದ ಆತಂಕವನ್ನು ಗ್ರಾಮಾಂತರ ಪೊಲೀಸರು ದೂರ ಮಾಡಿದ್ದಾರೆ.

ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದಿದ್ದ. ಹಾಗಾಗಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾಪಂನವರು ಸೀಲ್ ಹಾಕಿ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸಲಹೆ ನೀಡಿದ್ದರು. ಆದರೆ ಮಹೇಶ್ ಹೋಂ ಕ್ವಾರಂಟೈನ್ ಧಿಕ್ಕರಿಸಿ ಸ್ನೇಹಿತರಾದ ಶ್ರೀನಿವಾಸ್ ಮತ್ತು ಅಭಿಷೇಕ್‍ರೊಂದಿಗೆ ಚಿನಕುರಳಿಗೆ ತೆರಳಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್‍ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಸೀಲ್ ನೋಡಿ ಹಿಡಿದುಕೊಳ್ಳುತ್ತಾರೆ ಎಂಬ ಭಯದಿಂದ ನಮಗೆ ಕೊರೊನಾ ಇದೆ. ಮುಟ್ಟಿದರೆ ನಿಮಗೂ ಕೊರೊನಾ ಬರುತ್ತದೆ ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಚೆಕ್‍ಪೋಸ್ಟ್‍ನಲ್ಲಿ ಕಾರ್ಯನಿರತ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಆಟೋದಲ್ಲಿ ಈ ಮೂವರೂ ಪರಾರಿಯಾಗಿದ್ದರು.

ವಿಷಯ ತಿಳಿಯುದ್ದಂತೆಯೇ ತಹಸೀಲ್ದಾರ್ ಎಂ. ಶಿವಮೂರ್ತಿ, ಸಿಪಿಐ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಎಸ್‍ಐ ಲಕ್ಷ್ಮಣ್ ಮತ್ತಿತರರ ಅಧಿಕಾರಿಗಳು ಕೆ.ಆರ್.ಪೇಟೆ ತಾಲೂಕಿಗೆ ಬರುವ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿ ಚೆಕ್‍ಪೋಸ್ಟ್ ನೌಕರರು ಯುವಕರ ಬಗ್ಗೆ ನೀಡಿದ ಚಹರೆ ಮಾಹಿತಿಯನ್ನಾದರಿಸಿ ಕಾರ್ಯಾ ಚರಣೆ ನಡೆಸಿ ಆಟೋ ಸಮೇತ ಯುವಕರನ್ನು ಬಂಧಿಸಿದ್ದಾರೆ.