ಬ್ಯಾರಿ ಅಕಾಡೆಮಿ: ಅಶಕ್ತ ಬ್ಯಾರಿ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ; ಸ್ವಾಭಿಮಾನಿ ಸಾಹಿತಿಗಳ ಕಷ್ಟಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ- ರಹೀಮ್ ಉಚ್ಚಿಲ್

0
549

ಸನ್ಮಾರ್ಗ ವಾರ್ತೆ

ಮಂಗಳೂರು, ಏಪ್ರಿಲ್ 17- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 100 ಅರ್ಹ ಕವಿ, ಸಾಹಿತಿ ಹಾಗೂ ಕಲಾವಿದರ ಕುಟುಂಬಕ್ಕೆ ರೂ.1300.00 ಮೌಲ್ಯದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡುತ್ತ ಕೊರೋನಾ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಮನೆ ಮನೆ ತೆರಳಿ ಆಹಾರ ಕಿಟ್ ಗಳನ್ನು ನೀಡುತ್ತಿರುವ ಅಕಾಡೆಮಿಯ ಸೇವೆ ಶ್ಲಾಘನೀಯ ಎಂದರು ಹಾಗೂ ಉಳಿದ ಎಲ್ಲಾ ಅಕಡೆಮಿ, ನಿಗಮ, ಪ್ರಾಧಿಕಾರಗಳು ಕೂಡ ಅವರವರ ವ್ಯಾಪ್ತಿಗೆ ಬರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಕಡೆ ಹಮ್ಮಿಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ರವರು ಕಿಟ್ ವಿತರಿಸಿ ಮಾತನಾಡುತ್ತಾ ಕೇವಲ ಕಾಟಾಚಾರಕ್ಕೆ ಆಹಾರ ಕಿಟ್ ವಿತರಿಸದೆ ಒಂದು ಸಣ್ಣ ಕುಟುಂಬವು ಒಂದು ತಿಂಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿರುವ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ್ ಪಾಂಡೇಶ್ವರವರು ಮಾತನಾಡಿ ಅರ್ಹ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಬ್ಯಾರಿ ಅಕಾಡೆಮಿಯು ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಅತ್ಯಂತ ಶ್ರೇಷ್ಠವಾಗಿದ್ದು, ಬ್ಯಾರಿ ಅಕಾಡೆಮಿಯು ಇಂತಹ ಸಾಮಾಜಿಕ ಕಾರ್ಯಕ್ರಮವನ್ನು ಮಾಡುವ ಮೂಲಕ ತಾವು ಇತರರಿಗಿಂತ ಭಿನ್ನವೆಂದು ತೋರಿಸಿಕೊಟ್ಟಿದ್ದಾರೆ ಹಾಗೂ ಉಳಿದ ಅಕಾಡೆಮಿಗಳು ಕೂಡ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೇಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್ ಮಾತನಾಡಿ ಕವಿ, ಸಾಹಿತಿ ಮತ್ತು ಕಲಾವಿದರು ಕಷ್ಟಗಳಿಂದ ದೂರವಾಗಿ ಸಂತೃಪ್ತಿಯಿಂದ ಇದ್ದರೆ ಮಾತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಸಾದ್ಯ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಾಹಿತಿ ಕಲಾವಿದರಿಗೆ ಯಾವುದೇ ಆದಾಯ ಇರುವುದಿಲ್ಲ. ಹಾಗೆಯೇ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಯಾವತ್ತೂ ಯಾರ ಮುಂದೆಯೂ ಕೈಚಾಚದೆ ಸ್ವಾಭಿಮಾನದಿಂದ ಬದುಕುವವರು. ಇಂತವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಈ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆಯನ್ನು ಮಾಡುವ ಅವಕಾಶ ಒದಗಿರುವುದು ನಮ್ಮ ಸೌಭಾಗ್ಯ ಎಂದು ಅಭಿಪ್ರಾಯ ಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ.ರವಿಯವರ ಮಾರ್ಗದರ್ಶನದಂತೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ ಅಕಾಡೆಮಿಯ ಸದಸ್ಯರಾದ ಶ್ರೀ ಅಬ್ದುಲ್ ರಝಾಕ್ ಸಾಲ್ಮರ ನಿರೂಪಿಸಿ ಧನ್ಯವಾದವಿತ್ತರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮುರಳಿರಾಜ್ ಹಾಗೂ ರೂಪೇಶ್, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾದ ರಾಶ್ ಬ್ಯಾರಿ, ಮುನ್ನ ಕಮ್ಮರಡಿ, ಸಿದ್ದಿಕ್ ಮಂಜೇಶ್ವರ, ಫಾರೂಕ್ ಆತೂರು, ಇಮ್ರಾನ್ ಉಪ್ಪಿನಂಗಡಿ, ಖಾಲಿದ್ ನಂದಾವರ, ಅಝೀಝ್ ಲೊರಟ್ಟೊಪದವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.