ಸನ್ಮಾರ್ಗ ವಾರ್ತೆ
ನವದೆಹಲಿ: ಅಸ್ಸಾಂನಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಆಸಿಫ್ ಮುಜ್ತಬಾ ಅವರನ್ನು ಬಂಧಿಸಿರುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ತೀವ್ರವಾಗಿ ಖಂಡಿಸಿದೆ.
ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಿ, ಅವರಿಗೆ ಪರಿಹಾರ ಒದಗಿಸುವ ಹಾಗೂ ಅವರ ಸಂಕಷ್ಟದ ಅನುಭವಗಳನ್ನು ದಾಖಲಿಸುವ ಉದ್ದೇಶದಿಂದ ತೆರಳಿದ್ದ ಮಾನವ ಹಕ್ಕುಗಳ ಹೋರಾಟಗಾರನನ್ನು ಬಂಧಿಸಿರುವುದು ಗಂಭೀರ ಕಳವಳಕಾರಿ ಸಂಗತಿಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಮಲಿಕ್ ಮೊಅತಸಿಮ್ ಖಾನ್ ತಿಳಿಸಿದ್ದಾರೆ.
ಆಸಿಫ್ ಮುಜ್ತಬಾ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಹಾಗೂ ಅವರ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಗೌರವಿಸುವುದನ್ನು ಅಧಿಕಾರಿಗಳು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಸ್ಸಾಂನಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಗಳು ಮತ್ತು ಸಾವಿರಾರು ಮುಸ್ಲಿಮರನ್ನು ಅವರ ನೆಲೆಗಳಿಂದ ಸ್ಥಳಾಂತರಿಸುತ್ತಿರುವ ಕ್ರಮಗಳು ಸ್ಪಷ್ಟವಾಗಿ ತಾರತಮ್ಯದಿಂದ ಕೂಡಿವೆ. ಇಂತಹ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮಲಿಕ್ ಮೊಅತಸಿಮ್ ಖಾನ್ ಒತ್ತಾಯಿಸಿದ್ದಾರೆ.












