‘ಗಾಝಾದಲ್ಲಿನ ಒಪ್ಪಂದ ಪಾಲಿಸದಿದ್ದರೆ ಜವಾಬ್ದಾರಿಯಿಂದ ಹಿಂದೆ ಸರಿಯುತ್ತೇವೆ’; ನೆತನ್ಯಾಹುಗೆ ಕಠಿಣ ಎಚ್ಚರಿಕೆ

0
1

ಸನ್ಮಾರ್ಗ ವಾರ್ತೆ

ಜೆರುಸಲೇಂ/ನ್ಯೂಯಾರ್ಕ್: ಗಾಝಾ ಕದನ ವಿರಾಮ ಮತ್ತು ಯುದ್ಧಾನಂತರದ ಪುನರ್ನಿರ್ಮಾಣ ಒಪ್ಪಂದದ (20-ಅಂಶಗಳ ಯೋಜನೆ) ಬದ್ಧತೆಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪಾಲಿಸದಿದ್ದರೆ, ಗಾಝಾದ ಮೇಲಿನ ತನ್ನ ಉಸ್ತುವಾರಿಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ‘ಬೋರ್ಡ್ ಆಫ್ ಪೀಸ್’ ಕಠಿಣ ಎಚ್ಚರಿಕೆ ನೀಡಿದೆ. ಗಾಝಾಕ್ಕೆ ಸಂಬಂಧಿಸಿದ ಮಂಡಳಿಯ ಹೈ ರೆಪ್ರೆಸೆಂಟೇಟಿವ್ ನಿಕ್ಲೋಯ್ ಮ್ಲಾಡೆನೋವ್ ಅವರು ನೆತನ್ಯಾಹು ಅವರಿಗೆ ಕಳುಹಿಸಿದ ಪತ್ರದಲ್ಲಿ ಈ ಎಚ್ಚರಿಕೆ ರವಾನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನವೆಂಬರ್ 2025 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಟ್ರಂಪ್ ಅವರ 20-ಅಂಶಗಳ ಯೋಜನೆಗೆ ಅನುಮೋದನೆ ನೀಡಿ, 2027 ರ ಅಂತ್ಯದವರೆಗೆ ಗಾಝಾದ ಯುದ್ಧಾನಂತರದ ಯೋಜನೆ ಕುರಿತ ಪ್ರಕ್ರಿಯೆಯ ಉಸ್ತುವಾರಿಯನ್ನು ‘ಬೋರ್ಡ್ ಆಫ್ ಪೀಸ್’ಗೆ ವಹಿಸಿತ್ತು. ಆದರೆ, ಗಾಝಾದಲ್ಲಿ ತಮ್ಮ ಯೋಜನೆಯನ್ನು ಜಾರಿಗೆ ತರಲು ಇಸ್ರೇಲ್ ನಿರಂತರವಾಗಿ ಅಡ್ಡಿಪಡಿಸಿದರೆ, ಆ ಜವಾಬ್ದಾರಿಯಿಂದ ಹಿಂದೆ ಸರಿಯಬೇಕಾಗುತ್ತದೆ (ಅಥವಾ ವಿಶ್ವಸಂಸ್ಥೆ/ಪ್ಯಾಲೆಸ್ತೀನ್ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ) ಎಂದು ನಿಕ್ಲೋಯ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ನೆತನ್ಯಾಹು ಅವರಿಂದ ಯಾವುದೇ ಹೆಚ್ಚುವರಿ ರಿಯಾಯಿತಿಗಳನ್ನು ಮಂಡಳಿಯು ಕೇಳುತ್ತಿಲ್ಲ; ಬದಲಿಗೆ 20-ಅಂಶಗಳ ಒಪ್ಪಂದದಲ್ಲಿ ಈಗಾಗಲೇ ಒಪ್ಪಿಕೊಂಡಿರುವ ನಿಯಮಗಳನ್ನು ಮಾತ್ರ ಪಾಲಿಸುವಂತೆ ನೆನಪಿಸುತ್ತಿದೆ ಎಂದು ಮ್ಲಾಡೆನೋವ್ ಒತ್ತಿ ಹೇಳಿದ್ದಾರೆ. ಪ್ಯಾಲೆಸ್ತೀನಿಯರಿಗೆ ಸಾಕಷ್ಟು ಮಾನವೀಯ ನೆರವು ಮತ್ತು ಚಳಿಗಾಲಕ್ಕೆ ಅಗತ್ಯವಿರುವ ಆಶ್ರಯ ಸಾಮಗ್ರಿಗಳು ಗಾಝಾ ಪ್ರವೇಶಿಸಲು ಇಸ್ರೇಲ್ ನಿರ್ಬಂಧ ಹೇರಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಜೊತೆಗೆ, ಮಂಡಳಿಯ ತಾಂತ್ರಿಕ ಫೆಲೆಸ್ತೀನ್ ಆಡಳಿತ ಸಮಿತಿ ಗಾಝಾ ಪ್ರವೇಶಿಸಲು, ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ ನಿಯೋಜನೆಗೆ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಫೆಲೆಸ್ತೀನ್ ನಾಗರಿಕ ಪೊಲೀಸರಿಗೆ ತರಬೇತಿ ನೀಡಲು ಇಸ್ರೇಲ್ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.

ಮ್ಲಾಡೆನೋವ್ ಅವರ ಕಠಿಣ ಎಚ್ಚರಿಕೆಯ ಪತ್ರದ ನಂತರದ ದಿನಗಳಲ್ಲಿ ನೆತನ್ಯಾಹು ಅವರ ಧೋರಣೆಯಲ್ಲಿ ಬದಲಾವಣೆಯ ಲಕ್ಷಣಗಳು ಕಂಡುಬಂದಿದ್ದು, 20-ಅಂಶಗಳ ಯೋಜನೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಅವರು ಜರೆಡ್ ಕುಶ್ನರ್ ಅವರೊಂದಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಗಾಝಾಕ್ಕೆ ಸಂಬಂಧಿಸಿದ ಕ್ರಮಗಳಿಗೆ (ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ ನಿಯೋಜನೆ ಸೇರಿದಂತೆ) ಅನುಮೋದನೆ ನೀಡಲು ಭಾನುವಾರ ಭದ್ರತಾ ಸಂಪುಟ ಸಭೆ ಸೇರಲಿದೆ. ಒಂದು ವೇಳೆ ‘ಬೋರ್ಡ್ ಆಫ್ ಪೀಸ್’ ಯೋಜನೆ ವಿಫಲವಾಗಿ ಹಿಂದೆ ಸರಿಯಬೇಕಾದ ಪರಿಸ್ಥಿತಿ ಎದುರಾದರೆ, ಗಾಝಾದ ಭವಿಷ್ಯದ ಆಡಳಿತಕ್ಕಾಗಿ ಪರ್ಯಾಯ ಸನ್ನಿವೇಶಗಳ ಬಗ್ಗೆಯೂ ಅಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜವಾಬ್ದಾರಿ ವಹಿಸಿಕೊಳ್ಳುವುದು ಫೆಲೆಸ್ತೀನ್ ಪ್ರಾಧಿಕಾರ ಅಥವಾ ಮುಂದಿನ ಅಮೆರಿಕ ಆಡಳಿತದ ಜವಾಬ್ದಾರಿ ನೀಡುವ ಕುರಿತಂತೆಯೂ ಚರ್ಚೆಗಳು ನಡೆಯುತ್ತಿವೆ.