ಸನ್ಮಾರ್ಗ ವಾರ್ತೆ
ನವದೆಹಲಿ ಏಪ್ರಿಲ್ 18- ಲಾಕ್ ಡೌನ್ ದಿನಗಳಲ್ಲಿ ಮಹಿಳೆಯರ ಮೇಲಿನ ಗೃಹ ಹಿಂಸೆಗಳ ಸಂಖ್ಯೆಗಳಲ್ಲಿ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ. ಮಾರ್ಚ್ 23 ರಿಂದ ಏಪ್ರಿಲ್ 16 ರವರೆಗೆ 587 ದೂರುಗಳು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಲಭಿಸಿರುವುದಾಗಿ ಆಯೋಗ ತಿಳಿಸಿದೆ. ಇದರಲ್ಲಿ 239 ದೂರುಗಳು ಕೂಡ ಗೃಹ ಹಿಂಸೆಗೆ ಸಂಬಂಧಿಸಿದ್ದಾಗಿದೆ ಎಂದು ಆಯೋಗ ವಿವರಿಸಿದೆ.
ಆಯೋಗದ ವರದಿಯ ಪ್ರಕಾರ ಫೆಬ್ರವರಿ 27ರಿಂದ ಮಾರ್ಚ್ 22 ರವರೆಗೆ 127 ದೂರುಗಳಷ್ಟೇ ಆಯೋಗಕ್ಕೆ ಬಂದಿದ್ದು ಅದೇ ವೇಳೆ
ಕಳೆದ 25 ದಿನಗಳಲ್ಲಿ 239 ದೂರುಗಳು ಬಂದಿವೆ. ಇದರಲ್ಲಿ ಹೆಚ್ಚಿನವು ಗೃಹ ಹಿಂಸೆಗೆ ಸಂಬಂಧಿಸಿದ್ದಾಗಿದೆ. ಗೃಹ ಹಿಂಸೆಗಳ ದೂರುಗಳಲ್ಲಿ ಹೆಚ್ಚಳವನ್ನು ಅನುಸರಿಸಿ ರಾಷ್ಟ್ರೀಯ ಮಹಿಳಾ ಆಯೋಗವು ವಾಟ್ಸಪ್ ಸಂಖ್ಯೆಯನ್ನು ಬಿಡುಗಡೆಗೊಳಿಸಿದ್ದು, 72 17735372 ಈ ಸಂಖ್ಯೆಯನ್ನು ಸಂಪರ್ಕಿಸಿ ಮಹಿಳೆಯರು ತಮ್ಮ ಅಹವಾಲನ್ನು ಸಲ್ಲಿಸಬಹುದಾಗಿದೆ ಎಂದು ಆಯೋಗ ತಿಳಿಸಿದೆ
ಲಾಕ್ ಡೌನ್ ಕಾರಣದಿಂದಾಗಿ ಕುಟುಂಬ ಸದಸ್ಯರೆಲ್ಲ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ದೂರುಗಳಲ್ಲಿ ಇಷ್ಟು ಹೆಚ್ಚಳ ಕಂಡು ಬಂದಿರುವುದಾಗಿ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












