ಸನ್ಮಾರ್ಗ ವಾರ್ತೆ
ಸ್ಮರಣೆ
ಸೈಯದ್ ಸಆದತುಲ್ಲಾ ಹುಸೈನಿ
ಪ್ರವಾದಿ ಮುಹಮ್ಮದ್(ಸ) ಅವರ ಓರ್ವ ನಿಷ್ಠಾವಂತ ಅನುಯಾಯಿ ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಸಾಹೇಬ್ (88) ಈ ಲೋಕಕ್ಕೆ ವಿದಾಯ ಕೋರಿದರು. ಸಾವಿರಾರು ಮಂದಿ ಅವರು ತನ್ನನ್ನೇ ಹೆಚ್ಚು ಪ್ರೀತಿಸುತ್ತಿದ್ದರೆಂದು ಭಾವಿಸುತ್ತಿರಬಹುದು. ಪ್ರವಾದಿಯವರ ರೀತಿ ಅದೇ ಆಗಿತ್ತು. ಯಾರಾದರೂ ಮಾತಾಡಲು ಸಿಕ್ಕಿದರೆ ಅವರ ಕೈ ಹಿಡಿದು ಅವರಾಗಿ ಕೈ ಬಿಡುವ ತನಕ ಅವರ ಮಾತನ್ನು ಗಮನ ಕೊಟ್ಟು ಕೇಳುತ್ತಿದ್ದರು. ಮೊದಲು ಪ್ರೀತಿಯಿಂದ ಅಪ್ಪಿ ಹಿಡಿದು ನಂತರ ಮಾತುಕತೆ ಆರಂಭಿಸುತ್ತಿದ್ದರು. ಅವರ ವ್ಯಕ್ತಿತ್ವದ ಆಕರ್ಷಣೆಯನ್ನು ಭೇಟಿಯಾಗುವವನು ಪ್ರಥಮ ನೋಟದಲ್ಲೇ ಕಂಡುಕೊಳ್ಳುತ್ತಿದ್ದನು.
ಮೌಲಾನಾ ದೊಡ್ಡ ವಿದ್ವಾಂಸನೋ ದಾರ್ಶನಿಕನೋ ಆಗಿರಲಿಲ್ಲ. ಉನ್ನತ ಡಿಗ್ರಿಯನ್ನು ಪಡೆದಿರಲಿಲ್ಲ. ಅವರೋರ್ವ ಗ್ರಂಥಕರ್ತನೂ ಆಗಿರಲಿಲ್ಲ. ಆದರೆ ಬುದ್ಧಿವಂತಿಕೆ, ವ್ಯವಹಾರ ಜ್ಞಾನ, ವೈಚಾರಿಕ ಸಂತುಲನೆ ಹಾಗೂ ಮಾನವ ಪ್ರೇಮ, ಉನ್ನತ ಚಾರಿತ್ರ್ಯ, ಜನರೊಂದಿಗೆ ಗಾಢ ಸಂಬಂಧ ಅವರ ಬಂಡವಾಳವಾಗಿತ್ತು. ಈ ಎಲ್ಲ ಗುಣಗಳನ್ನು ಅವರು ಇಸ್ಲಾಮೀ ಆಂದೋಲನಕ್ಕಾಗಿ ಅತ್ಯುತ್ತಮ ರೀತಿಯಲ್ಲಿ ವಿನಿಯೋಗಿಸಿದರು. ಕಾರ್ಯಕರ್ತರು ಅವರನ್ನು ಸಂಧಿಸಿ ಹೊಸ ಹುರುಪು ಮತ್ತು ಸಂಕಲ್ಪದೊಂದಿಗೆ ಮರಳುತ್ತಿದ್ದರು. ಮುಸ್ಲಿಮ್ ಜನಸಾಮಾನ್ಯರು ಅವರನ್ನು ಭೇಟಿಯಾಗಿ ಆಂದೋಲನದಿಂದ ಪ್ರಭಾವಿತರಾಗುತ್ತಿದ್ದರು. ಮುಸ್ಲಿಮೇತರ ಬಾಂಧವರು ಸಂಧಿಸಿದ ಬಳಿಕ ಇಸ್ಲಾಮ್ ಮತ್ತು ಆಂದೋಲನದ ಕುರಿತು ಸದಭಿಪ್ರಾಯ ಹೊಂದುತ್ತಿದ್ದರು.
ರಾಯಚೂರು ಜಿಲ್ಲೆಯ ಜವಳಗೆರೆ ಎಂಬ ಊರಿನಲ್ಲಿ 1932ರಲ್ಲಿ ಹುಟ್ಟಿದರು. ಅವರ ತಂದೆ ಓರ್ವ ಜಮೀನ್ದಾರರಾಗಿದ್ದರು. ಬಾಲ್ಯದಲ್ಲಿ ಯಾವುದೋ ರಾಜನೊಂದಿಗೆ ಉಂಟಾದ ವಿರಸದಿಂದಾಗಿ ಅನೇಕ ವರ್ಷಕಾಲ ಅಜ್ಞಾತವಾಸ ಅನುಭವಿಸಬೇಕಾಗಿತ್ತು. ಅದರಿಂದಾಗಿ ಅವರಿಗೆ ಸರಿಯಾದ ವಿದ್ಯಾಭ್ಯಾಸ ದೊರೆತಿರಲಿಲ್ಲ. ಆದರೆ ಇಸ್ಲಾಮೀ ಸಾಹಿತ್ಯಗಳ ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಇಸ್ಲಾಮೀ ಆಂದೋಲನದ ಪರಿಚಯವಾಯಿತು. ದೀರ್ಘಕಾಲದ ಗೃಹಬಂಧನದಿಂದ ಮುಕ್ತಿ ದೊರೆತಾಗ ಅಲ್ಲಾಹನ ಧರ್ಮಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಆವೇಶ ಅವರಲ್ಲಿ ಮೂಡಿತು. ಸಣ್ಣ ಪ್ರಾಯದಲ್ಲಿ ಜಮಾಅತ್ನ ಸದಸ್ಯರಾದರು. 24ನೇ ಪ್ರಾಯದಲ್ಲಿ ಕರ್ನಾಟಕದ ಘಟಕಾಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿಂದ ಅವರ ಜೀವನ ಅಲ್ಲಾಹನ ಧರ್ಮಕ್ಕಾಗಿ ತ್ಯಾಗ ಪರಿಶ್ರಮಗಳಲ್ಲಿ ಕಳೆಯಿತು. ಮನೆಯ ಆಡಂಬರದ ಜೀವನ ಶೈಲಿಯನ್ನು ಬಿಟ್ಟು ಅತ್ಯಂತ ಸರಳ ಜೀವನ ಸಾಗಿಸಿದರು. ಕರ್ನಾಟಕದ ಮೂಲೆ ಮೂಲೆಗಳಿಗೆ ಪ್ರಯಾಸಕರ ಪ್ರವಾಸ ಕೈಗೊಂಡು ನೂರಾರು ಕುಟುಂಬಗಳನ್ನು ಪ್ರಭಾವಿತಗೊಳಿಸಿದರು. ಅಸಂಖ್ಯಾತ ಜನರಿಗೆ ಆಂದೋಲನವನ್ನು ಪರಿಚಯಿಸಿದರು. ಕಾರ್ಯಕರ್ತರ ದಂಡನ್ನೇ ಸಿದ್ಧಪಡಿಸಿದರು.
ಜಮಾಅತ್ ಬಾಂಧವರ ಒಂದು ಸಭೆಯಲ್ಲಿ ನಾನು ಅವರನ್ನು ಪ್ರಥಮವಾಗಿ ಭೇಟಿಯಾಗಿದ್ದೆ. ಆಗ ನಾನು ಎಸ್ಐಓನ ಓರ್ವ ಅಜ್ಞಾತ ಕಾರ್ಯಕರ್ತನಾಗಿದ್ದೆ. ಅನಂತರ ಅವರೆಂದೂ ನನ್ನ ಹೆಸರನ್ನು ಮರೆಯಲಿಲ್ಲ. ಆ ಬಳಿಕ ಅಲ್ಲಲ್ಲಿ ನಮ್ಮ ಭೇಟಿಯಾಗುತ್ತಿತ್ತು. ಎಸ್.ಐ.ಓ.ನ ರಾಷ್ಟ್ರಾಧ್ಯಕ್ಷನಾಗುವುದರೊಂದಿಗೆ ಅನೇಕ ವರ್ಷಗಳ ಕಾಲ ಅವರೊಂದಿಗೆ ಕಳೆಯುವ ಅವಕಾಶ ಸಿಕ್ಕಿತು. ಆಗ ಕೇಂದ್ರದ ನಾಯಕರೊಂದಿಗೆ ನಮಗೆ ಮುಜುಗರವಾಗುತ್ತಿರಲಿಲ್ಲ. ಮೌಲಾನಾರು ನಮಗೆ ಮಾತಾಡುವ ಎಲ್ಲ ಅವಕಾಶಗಳನ್ನೂ ಒದಗಿಸುತ್ತಿದ್ದರು. ನಮ್ಮ ವೈಯಕ್ತಿಕ ಜೀವನದ ಕುರಿತು, ನಮ್ಮ ಹೆತ್ತವರ ಕುರಿತು, ವಿದ್ಯಾಭ್ಯಾಸದ ಕುರಿತೂ ಪ್ರಶ್ನಿಸುತ್ತಿದ್ದರು. ನಾವು ಹೇಳುವುದನ್ನು ನೆನಪಿಡುತ್ತಿದ್ದರು. ಜನರ ವೈಯಕ್ತಿಕ ಸಮಸ್ಯೆಗಳ ಕುರಿತು ಆಸಕ್ತಿ ವಹಿಸುತ್ತಿದ್ದರು. ನನಗೆ ಮದುವೆಯಾಗಿರಲಿಲ್ಲ. ಒಂದೆರಡು ಸಂಬಂಧಗಳನ್ನು ತೋರಿಸಿದರು. ತಂದೆಯೊಂದಿಗೂ ಮಾತಾಡಿದ್ದರು. ಇಂತಹ ಅನೇಕ ವಿಷಯಗಳಿಗೆ ಅವರ ವ್ಯಕ್ತಿತ್ವವು ಸಾಕ್ಷಿಯಾಗಿದೆ.
ನಮಗೊಂದು ಪ್ರಯಾಣ ಹೊರಡಲಿಕ್ಕಿದೆಯೆಂದು ತಿಳಿದಾಗ ಅದರ ಸಂಪೂರ್ಣ ಮಾಹಿತಿ ಪಡೆದು ತನ್ನ ಅನುಭವದ ಆಧಾರದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. 2002ರಲ್ಲಿ ಎಸ್.ಐ.ಓ.ನ ಒಂದು ರಾಷ್ಟ್ರೀಯ ಅಭಿಯಾನ ನಡೆಯಬೇಕಿತ್ತು. ನಾನು ನಿರಂತರ ಪ್ರವಾಸದಲ್ಲಿದ್ದೆ. ಭೋಪಾಲದಲ್ಲಿ ಒಂದು ಕಾರ್ಯಕ್ರಮ ಮುಗಿಸಿ ಮರುದಿನ ಮೀರತ್ನ ಒಂದು ಸಭೆಯಲ್ಲಿ ನನಗೆ ಅಧ್ಯಕ್ಷತೆ ವಹಿಸಬೇಕಿತ್ತು. ಭೋಪಾಲ ಸ್ಟೇಷನ್ಗೆ ತಲುಪಿದಾಗ ನಮ್ಮ ರಿಸರ್ವೇಶನ್ ಕ್ಯಾನ್ಸಲ್ ಆದ ಮಾಹಿತಿ ಸಿಕ್ಕಿತು. ನಾವು ಕೂಡಲೇ ದೆಹಲಿಯ ಟಿಕೆಟ್ ಪಡೆದೆವು. ಅಲ್ಲಿಂದ ಕಾರಲ್ಲಿ ವೇಗವಾಗಿ ಹೋದರೆ ಮಾತ್ರ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ತಲುಪಬಹುದಿತ್ತು. ದೆಹಲಿಯ ಬಂಧುಗಳಿಗೆ ಪೋನ್ ಮಾಡಿ ಕಾರ್ ನ ವ್ಯವಸ್ಥೆ ಮಾಡಲು ಹೇಳಿದೆವು. ಈ ವಿಷಯ ಮೌಲಾನಾರಿಗೆ ತಿಳಿದಾಗ ಅವರ ಕಳವಳ ಹೇಳತೀರದು. ಕಾರ್ಯಕ್ರಮಕ್ಕೆ ಮುಟ್ಟಿ ಎಲ್ಲವೂ ಸಾಂಗವಾಗಿ ಮುಗಿಯುವ ವರೆಗೆ ಪ್ರತಿ ಹಂತದಲ್ಲೂ ಅವರು ಮಾಹಿತಿ ಪಡೆದರು. ಪ್ರಯಾಣದಿಂದ ಮರಳಿದಾಗ ನನ್ನನ್ನು ಕರೆದು ಸಂಪೂರ್ಣ ವರದಿಯನ್ನು ಪಡೆದರು.
ದೇಶದಾದ್ಯಂತ ಇರುವ ಆಂದೋಲನ ಬಾಂಧವರೊಂದಿಗೆ ಅವರು ಪೋಸ್ಟ್ ಕಾರ್ಡ್ ಮೂಲಕ ವ್ಯವಹರಿಸುತ್ತಿದ್ದರು. ಅವರ ಬಳಿ ಪೋಸ್ಟ್ ಕಾರ್ಡ್ನ ಒಂದು ಕಟ್ಟು ಸದಾ ಇರುತ್ತಿತ್ತು. ಮನೆಯಲ್ಲೂ ಪ್ರಯಾಣದ ವೇಳೆ ಪೋಸ್ಟ್ ಕಾರ್ಡ್ ಬರೆಯುತ್ತಿದ್ದರು. ಯಾರಾದರೂ ಪತ್ರ ಬರೆದರೆ ಕೂಡಲೇ ಸ್ಪಂದಿಸುತ್ತಿದ್ದರು. ದೂರದ ಪ್ರಯಾಣದ ವೇಳೆ, ಮಧ್ಯದಲ್ಲಿ ಬರುವ ಸ್ಟೇಷನ್ಗಳ ಬಾಂಧವರಿಗೆ ತಿಳಿಸುತ್ತಿದ್ದರು. ಸ್ಟೇಷನ್ಗೆ ಬರುವ ಬಂಧುಗಳನ್ನು ಭೇಟಿ ಮಾಡಿ ಸಂತೋಷಪಡುತ್ತಿದ್ದರು.
ಓರ್ವ ಆಂದೋಲನದ ನಾಯಕನಿಗೆ ಮೂರು ಕಾರ್ಯಗಳನ್ನು ಮಾಡಲಿಕ್ಕಿರುತ್ತದೆ. 1. ವಿಷನ್ ಮತ್ತು ಗುರಿ. 2. ಕಾರ್ಯಕರ್ತರ ಸರ್ವತೋಮುಖ ತರಬೇತಿ. 3. ಗುರಿ ಸಾಧನೆಗಾಗಿ ಬಲಿಷ್ಠ ಸಂಘಟನಾ ಚೌಕಟ್ಟು. ಮೌಲಾನಾ ಈ ಮೂರು ರಂಗಗಳಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದರು. ಅವುಗಳ ಸಮಗ್ರ ಅಧ್ಯಯನವಾಗಬೇಕಿದೆ. ಅವರ ವಿಷನ್ನಲ್ಲಿ ದಾವಾಕ್ಕೆ ಕೇಂದ್ರೀಯ ಸ್ಥಾನವಿದೆ. ತಮ್ಮ ಭಾಷಣಗಳ ಮೂಲಕ ಜಮಾಅತ್ನಲ್ಲಿ ಈ ಪ್ರಜ್ಞೆ ಬೆಳೆಸಿದರು. ಮುಸ್ಲಿಮೇತರರೊಂದಿಗೆ ಸಂಪರ್ಕದ ರೂಪವನ್ನು ತಾನೂ ಮಾಡಿದರು. ಜಮಾಅತನ್ನೂ ಅದಕ್ಕೆ ಹುರಿದುಂಬಿಸಿದರು. ಅದಕ್ಕಾಗಿ ಅನೇಕ ಉಪಸಂಸ್ಥೆಗಳನ್ನು ಸ್ಥಾಪಿಸಿದರು. ಮುಸಲ್ಮಾನರ ಗತಕಾಲದ ವೈಭವಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನು ಮತ್ತು ರಾಜ ಮಹಾರಾಜರುಗಳ ಸಾಧನೆಗಳನ್ನು ಹಾಡಿ ಹೊಗಳುತ್ತಾ ತಮ್ಮಲ್ಲಿ ತಾವೇ ಮುಳುಗಿರುವುದರ ಬದಲು ಕಾಲದ ತಮ್ಮ ಹೊಣೆಗಾರಿಕೆಗಳ ಕಡೆಗೆ ಗಮನ ಹರಿಸಬೇಕು ಎಂದವರು ಬಯಸಿದ್ದರು. ಸಂದೇಶ ಪ್ರಚಾರಕ್ಕೆ ಅಗತ್ಯವಾದ ದಕ್ಷತೆ, ಪ್ರಾಮಾಣಿಕತೆ ಹಾಗೂ ಜನಾಂಗೀಯ ಮತ್ತು ಕೋಮು ಪಕ್ಷಪಾತ ರಹಿತ ನಿಲುವನ್ನು ತಾನೂ ಅಳವಡಿಸಿದರು. ತಮ್ಮ ಸಂಗಾತಿಗಳಲ್ಲೂ ಬೆಳೆಸಲು ಪ್ರಯತ್ನಿಸಿದರು.
ಸಮಾಲೋಚನೆಯು ಅವರ ವಿಶೇಷತೆಯಾಗಿತ್ತು. ಸಂಗಾತಿಗಳೊಡನೆ ಅತಿಹೆಚ್ಚು ಸಮಾಲೋಚನೆ ನಡೆಸುತ್ತಿದ್ದರು. ಕೆಲವರು ಹೆಚ್ಚು ಸಮಾಲೋಚನೆಯನ್ನು ಆಕ್ಷೇಪಿಸುತ್ತಿದ್ದರಾದರೂ ಅವರು ಅದಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ಕಾರ್ಯ ವಿಂಗಡನೆಯು ಅವರ ಇನ್ನೊಂದು ವಿಶೇಷತೆಯಾಗಿತ್ತು. ಸಂಘಟನೆ ಎಲ್ಲ ಕಾರ್ಯಗಳನ್ನೂ ತಾನೊಬ್ಬನೇ ಮಾಡಲಾರೆನೆಂದೂ ಅವರು ಮನಗಂಡಿದ್ದರು. ಆದ್ದರಿಂದ ಅನೇಕ ಕೆಲಸಗಳು ಸಹಾಯಕರಿಗೆ ವಹಿಸಿಕೊಟ್ಟು ಅವರಿಗೆ ಕೆಲಸ ಮಾಡಲು ಪೂರ್ಣ ಅಧಿಕಾರ ಮತ್ತು ಅವಕಾಶ ಮಾಡಿಕೊಟ್ಟರು. ವೈಜ್ಞಾನಿಕ ಮತ್ತು ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ ಮೌ| ಜಲಾಲುದ್ದೀನ್ ಉಮರಿ, ಡಾ| ಅಬ್ದುಲ್ ಹಕ್ ಅನ್ಸಾರಿ, ಡಾ| ಫಝ್ಲುರ್ರಹ್ಮಾನ್ ಫರೀದಿಯವರನ್ನು ಮುಂದು ಮಾಡಿದರು. ಸಂಘಟನಾ ಕಾರ್ಯಗಳ ಮಾರ್ಗದರ್ಶನಕ್ಕೆ ಮೌ| ಶಫೀ ಮೂನಿಸ್, ಮುಹಮ್ಮದ್ ಜಾಫರ್ ರನ್ನು ನೇಮಿಸಿದರು. ಸಾಮುದಾಯಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಮೌ| ಶಫೀ ಮೂನಿಸ್, ಸೈಯದ್ ಯೂಸುಫ್ ಮರ್ಹೂಮ್ ಮತ್ತು ಅಬ್ದುಲ್ ಕಯ್ಯೂಮ್ರಂತಹವರ ಸಹಕಾರ ಪಡೆದರು. ಈ ರೀತಿ ಸಾಮೂಹಿಕ ನಾಯಕತ್ವದ ಒಂದು ಜಾಲವನ್ನೇ ಕೇಂದ್ರದಲ್ಲಿ ಬೆಳಗಿಸಿದರು.
ಯುವಕರನ್ನು ಮತ್ತು ಹೊಸ ಮುಖಗಳನ್ನು ಮುಂದೆ ತರುವುದು ಮತ್ತು ಅವರಿಗೆ ಹೊಣೆಗಾರಿಕೆಗಳನ್ನು ವಹಿಸಿಕೊಡುವುದು ಅವರ ಸಂಘಟನಾ ಚಾತುರ್ಯದ ಮೂರನೆಯ ವಿಶೇಷತೆಯಾಗಿತ್ತು. ಅವರ ಎರಡು ಮೀಕಾತ್ಗಳಲ್ಲಿ ಘಟಕಾಧ್ಯಕ್ಷರ ನೇಮಕಗಳೆಲ್ಲ ಅವರ ದಿಟ್ಟ ಹೆಜ್ಜೆಯಾಗಿತ್ತು. ಹೆಚ್ಚಿನ ಘಟಕಾಧ್ಯಕ್ಷರು ತಂತಮ್ಮ ಘಟಕಗಳಲ್ಲಿ ಕಿರಿಯರಾಗಿದ್ದರು. ಅವರನ್ನು ಮುಂದೆ ಮಾಡಿ ಜಮಾಅತ್ಗೆ ಹೊಸ ಹುರುಪು ಮತ್ತು ಶಕ್ತಿ ನೀಡಿದರು. ಯುವಕರ ತರಬೇತಿಯ ಶೈಲಿಯೂ ಅವರದು ಅಪೂರ್ವವಾಗಿತ್ತು. ದೇಶದ ಉದ್ದಗಲಕ್ಕೂ ಅವರು ಪ್ರವಾಸ ಕೈಗೊಂಡಿದ್ದರು. ಪ್ರವಾಸದಲ್ಲಿ ಯುವ ಘಟಕಾಧ್ಯಕ್ಷರುಗಳನ್ನು ಜೊತೆಗಿರಿಸುತ್ತಿದ್ದರು. ಒಂದೊಂದು ಘಟಕದ ನಗರಗಳಿಗೂ ಗ್ರಾಮಗಳಿಗೂ ಅವರು ಭೇಟಿ ಕೊಡುತ್ತಿದ್ದರು. ಆ ಸಂದರ್ಭಗಳಲ್ಲಿ ತನ್ನೊಂದಿಗಿರುವ ಘಟಕಾಧ್ಯಕ್ಷರುಗಳಿಗೆ ತನ್ನ ಒಡನಾಟದಿಂದ ಪ್ರಯೋಜನ ಪಡೆಯುವ ಅವಕಾಶ ಒದಗಿಸುತ್ತಿದ್ದರು. ಅದರಿಂದ ಅವರಿಗೆ ಜಮಾಅತ್ ಚಟುವಟಿಕೆಗಳ ರೀತಿ-ನೀತಿ ಮತ್ತು ಶಿಷ್ಟಾಚಾರಗಳನ್ನು ಚೆನ್ನಾಗಿ ಕರಗತ ಮಾಡಿಕೊಳ್ಳುವ ಅವಕಾಶ ಲಭಿಸುತ್ತಿತ್ತು.
2008-11ರ ಮೀಕಾತ್ನಲ್ಲಿ ನಾನು ಕೇಂದ್ರ ಮಜ್ಲಿಸೆ ಶೂರಾದ ಸದಸ್ಯನಾಗಿದ್ದೆ. ಮೌಲಾನ ನನ್ನ ಜನನಕ್ಕಿಂತ ಮೊದಲು ಅದರ ಸದಸ್ಯರಾಗುತ್ತಾ ಬಂದಿದ್ದರು. ಮಜ್ಲಿಸ್ ಸಭೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ನನ್ನ ತರಬೇತಿಯು ಮೌಲಾನ ಮತ್ತು ಅವರ ಕೆಲವು ಶಿಷ್ಯರ ಆಶ್ರಯದಲ್ಲೇ ನಡೆಯಿತು. ಶೂರಾದ ಸಭೆಗಳಲ್ಲಿ ಈ ಮೇರು ವ್ಯಕ್ತಿಗಳ ಮಧ್ಯೆ ನಮಗೆ ಬಾಯಿ ತೆರೆಯಲು ಯಾವುದೇ ಮುಜುಗರವಾಗುತ್ತಿರಲಿಲ್ಲ. ನಾವು ಸ್ವತಂತ್ರವಾಗಿ ಮಾತಾಡುತ್ತಿದ್ದೆವು. ಸಲಹೆಗಳನ್ನೂ ಕೊಡುತ್ತಿದ್ದೆವು. ಅವರ ಮಾತುಗಳಿಗೆ ಭಿನ್ನಾಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದೆವು. ಈ ಅಪ್ಪಟ ಪ್ರಜಾಸತ್ತಾತ್ಮಕ ರೀತಿಯು ಇಸ್ಲಾಮೀ ಆಂದೋಲನದ ಅತಿದೊಡ್ಡ ವಿಶೇಷತೆಯಾಗಿದೆ. ಇದು ಮೌಲಾನರಂತಹ ವಿಶಾಲ ಹೃದಯಿಗಳ ಕೊಡುಗೆಯಾಗಿದೆ.
ಮೌಲಾನರ ಭಯಭಕ್ತಿಯನ್ನು ಅವರೊಂದಿಗೆ ಪ್ರಯಾಣದ ವೇಳೆ ಹತ್ತಿರದಿಂದ ನೋಡಲು ಸಿಕ್ಕಿತು. ಪ್ರಭಾತೋದಯಕ್ಕಿಂತ ಮುಂಚೆ ಎದ್ದು ತಣ್ಣೀರಿನ ಸ್ನಾನ ಮಾಡಿ ನಮಾಝï ಮತ್ತು ತಿಲಾವತ್ಗಳೊಂದಿಗೆ ಅವರ ದಿನಚರಿ ಆರಂಭಗೊಳ್ಳುತ್ತಿತ್ತು. ದಿಕ್ರ್-ತಸ್ಬೀಹ್ಗಳನ್ನು ತಪ್ಪದೆ ಪಾಲಿಸುತ್ತಿದ್ದರು. ಎಷ್ಟೇ ನಿಬಿಡತೆಯಿದ್ದರೂ ತಹಜ್ಜುದ್ ನಿರ್ವಹಿಸದೆ ಇರುತ್ತಿರಲಿಲ್ಲ. ಊರಲ್ಲಿದ್ದರೂ ಪ್ರಯಾಣದಲ್ಲಿದ್ದರೂ ಸರಿ.
ಅಲ್ಲಾಹನೊಂದಿಗೆ ಗಾಢ ಸಂಬಂಧ, ಅವನ ದಾಸರೊಂದಿಗೆ ಆತ್ಮೀಯ ಪ್ರೀತಿ-ಅನುಕಂಪ, ಸಕಲ ಮಾನವರಿಗೆ ನೇರಮಾರ್ಗ ಸಿಗಲೆಂಬ ಆಗ್ರಹ, ಜೀವನ ಉನ್ನತ ಧ್ಯೇಯ ಮತ್ತು ಅದಕ್ಕಾಗಿ ಸರ್ವಸ್ವವನ್ನೂ ಅರ್ಪಿಸುವ ಸ್ಫೂರ್ತಿ- ಈ ಗುಣಗಳೇ ವ್ಯಕ್ತಿಗಳಿಗೆ ಔನ್ನತ್ಯವನ್ನು ದಯಪಾಲಿಸುತ್ತವೆ. ಈ ನಿಟ್ಟಿನಲ್ಲಿ ಮೌಲಾನ ಸಿರಾಜುಲ್ ಹಸನ್ ಖಂಡಿತವಾಗಿಯೂ ಯಶಸ್ವಿ ನಾಯಕರಾಗಿದ್ದರು.
ಅಲ್ಲಾಹನು ಅವರ ಎಲ್ಲ ಸತ್ಕರ್ಮಗಳನ್ನು ಸ್ವೀಕರಿಸಲಿ. ಲೋಪದೋಷಗಳನ್ನು ಮನ್ನಿಸಲಿ. ಅವರ ಮೇಲೆ ಕರುಣೆ ತೋರಲಿ. ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನ ನೀಡಲಿ. ಆಂದೋಲನಕ್ಕೆ ಅವರಂತಹ ನಾಯಕರನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ.
(ಲೇಖಕರು ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.)
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












