ಕಲಬುರುಗಿಯಲ್ಲಿ ಮತ್ತೊಂದು ಜಾತ್ರೋತ್ಸವ: 200 ಮಂದಿ ಭಾಗಿ, 15 ಮಂದಿ ಕಸ್ಟಡಿಗೆ

0
989

ಸನ್ಮಾರ್ಗ ವಾರ್ತೆ

ಕಲಬುರ್ಗಿ ಏಪ್ರಿಲ್ 19- ಲಾಕ್ ಡೌನ್ ಉಲ್ಲಂಘಿಸಿ ಇತ್ತೀಚೆಗಷ್ಟೇ ಇಲ್ಲಿನ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ದೇವರ ತೇರನ್ನು ಎಳೆದು ಸುದ್ದಿಗೀಡಾಗಿದ್ದ ಕಲಬುರ್ಗಿ ಜಿಲ್ಲೆಯು ಏಪ್ರಿಲ್ 15ರಂದು ಇಂಥದ್ದೇ ಮತ್ತೊಂದು ಘಟನೆಗೆ ಸಾಕ್ಷಿಯಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ 15ರಂದೇ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.

ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಹನುಮಾನ್ ಮಂದಿರದ ಜಾತ್ರೋತ್ಸವವನ್ನು ಏಪ್ರಿಲ್ 15ರಂದು ನಡೆಸಲಾಗಿದ್ದು, ಸುಮಾರು 200 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ದೇಶಾದ್ಯಂತ ಲಾಕ್ ಡೌನ್ ಇದ್ದರೂ ಕಲಬುರ್ಗಿಯಲ್ಲಿ ಇಷ್ಟೊಂದು ಜನರು ಸೇರಿ ಜಾತ್ರೋತ್ಸವ ನಡೆಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದೆ. ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆ ನಡೆಯುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಅಲಂದ ತಾಲೂಕು ಮಹಾರಾಷ್ಟ್ರ ಗಡಿಗೆ ತಾಗಿಕೊಂಡಿದ್ದು, ಈಗಾಗಲೇ ಕೊರೋನಾ ಪಾಸಿಟಿವ್ ಪ್ರಕರಣಗಳು ಇಲ್ಲಿ ಹೆಚ್ಚಳವಾಗುತ್ತಿರುವುದರಿಂದ ಘಟನೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ತಾಲೂಕು ತಹಸಿಲ್ದಾರ್ ದಯಾನಂದ ಪಾಟೀಲ್ ಅವರು ಘಟನೆಯ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಪೊಲೀಸರು 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿರುವುದಲ್ಲದೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ನಿಂಬರಗಿ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ್ ಕುಮಾರ್ ಚೌಹಾನ್ ಅವರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.