ಸನ್ಮಾರ್ಗ ವಾರ್ತೆ
ಮಂಗಳೂರು ಎಪ್ರಿಲ್ 20- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋರೋನಾ ಸೋಂಕಿತ ಬಂಟ್ವಾಳ ಮೂಲದ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ಮಹಿಳೆಯ ಸಂಪರ್ಕದಲ್ಲಿದ್ದ ಸುಮಾರು 20ರಷ್ಟು ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಸಿ ರೋಡ್ ವೃತ್ತದಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಬಂಟ್ವಾಳ ಪೇಟೆಯ ಮಧ್ಯದಲ್ಲಿ ಮಹಿಳೆಯ ಮನೆಯಿದ್ದು, ಸುತ್ತಮುತ್ತಲ ಮನೆ ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಮತ್ತು ಕೆಲವರನ್ನು ಹುಡುಕುವ ಪ್ರಯತ್ನವನ್ನು ಪೊಲೀಸರು ಮುಂದುವರಿಸಿದ್ದಾರೆ. ಕ್ವಾರಂಟೈನ್ ನಲ್ಲಿರುವವರಲ್ಲಿ ಕೆಲವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಇವತ್ತು ಸೋಮವಾರ ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.
ಇದೇ ವೇಳೆ ಮೃತಪಟ್ಟ ಮಹಿಳೆಯ ಕುಟುಂಬದ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದ್ದು ಪಕ್ಷವಾತ ಪೀಡಿತರಾಗಿರುವ ಅವರ ಅತ್ತೆಯನ್ನು ಐಸಿಯುಗೆ ದಾಖಲಿಸಲಾಗಿದೆ ಮತ್ತು ಜಾಂಡಿಸ್ ನಿಂದ ಬಳಲುತ್ತಿರುವ ಅವರ ಪತಿ ಹಾಗೂ ವಿದೇಶದಿಂದ ಬಂದಿದ್ದ ಮಗನನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮೃತರು ಸುಮಾರು 50 ವರ್ಷ ಪ್ರಾಯದವರಾಗಿದ್ದು, ಅವರ ಅತ್ತಿಗೆಗೆ ಹಿರಿಪ್ರಾಯವಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಹೆಚ್ಚು ನಿಗಾ ಇಡಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾದಿಂದಾಗಿ ಸಾವಿಗೀಡಾದ ಮೊದಲ ಪ್ರಕರಣ ಇದಾಗಿರುವುದರಿಂದ ಮತ್ತು ಬಂಟ್ವಾಳ ಒಳಭಾಗವು ಹೆಚ್ಚು ಜನಭರಿತ ಪ್ರದೇಶವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ. ಬಂಟ್ವಾಳ ಕಸಬಾ, ಜಕ್ರಿಬೆಟ್ಟು, ಬಡ್ಡಕಟ್ಟೆ ಸಹಿತ ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಪಟ್ಟಣದಿಂದ ಹೊರಹೋಗುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಸಾವನ್ನಪ್ಪಿರುವ ಮಹಿಳೆಯ ಮನೆ ಬಂಟ್ವಾಳ ಪೇಟೆಯ ಮಧ್ಯೆ ಇರುವುದರಿಂದ ಅದರ ಸುತ್ತಮುತ್ತಲೂ ಮುನ್ನೂರಕ್ಕೂ ಅಧಿಕ ಮನೆಗಳು ಅಂಗಡಿಗಳು ಇದ್ದು ಇಡೀ ಪರಿಸರಕ್ಕೆ ಪೊಲೀಸರು ತೆರಳಿ ಮನೆಯಿಂದ ಯಾರೂ ಹೊರ ಬರದಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಬಂಟ್ವಾಳ ಪಟ್ಟಣವನ್ನು ಮೂರು ಭಾಗಗಳಾಗಿ ಪೊಲೀಸರು ವಿಂಗಡಿಸಿದ್ದು ಮೃತ ಮಹಿಳೆಯ ಮನೆಯಿಂದ 500 ಮೀಟರ್ ಅಂತರದಲ್ಲಿ ಕಠಿಣ ಸೀಲ್ ಡೌನ್ ಘೋಷಿಸಿದ್ದಾರೆ ಮತ್ತು ಈ ಪ್ರದೇಶ ಸಂಪೂರ್ಣ ಬಂದ್ ಆಗಿರಲಿದೆ. ಅವರ ಮನೆಯ ಒಂದು ಕಿಲೋ ಮೀಟರ್ ವ್ಯಾಪ್ತಿಯನ್ನು ನಿಗಾದಲ್ಲಿ ಇಡಲಾಗಿದ್ದು, ಈ ಪ್ರದೇಶದ ಪ್ರತಿ ಮನೆಗಳಿಗೂ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.
ಹಾಗೆಯೇ ಮೃತ ಮಹಿಳೆಯ ಮನೆಯ 5 ಕಿಲೋ ಮೀಟರ್ ವ್ಯಾಪ್ತಿಯನ್ನು ಕಣ್ಗಾವಲಿನಲ್ಲಿ ಇಡಲಾಗಿದ್ದು, ಸುರಕ್ಷಿತ ಅಂತರವೂ ಸೇರಿದಂತೆ ವೈರಸ್ ಹರಡದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೀಲ್ ಡೌನ್ ಆದ ಪ್ರದೇಶಗಳಲ್ಲಿ ಯಾರಾದರೂ ಮನೆಯಿಂದ ಹೊರಬಂದರೆ ಪೊಲೀಸರಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಮೃತ ಮಹಿಳೆಯನ್ನು 5 ದಿನಗಳ ಹಿಂದೆ ಬಂಟ್ವಾಳದ ವೈದ್ಯರೊಬ್ಬರು ತಪಾಸಣೆ ನಡೆಸಿದ್ದು ಅವರಿಗೂ ಕ್ವಾರಂಟೈನ್ ವಿಧಿಸಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಲಾಕ್ಡೌನ್ ಘೋಷಿಸಿದ ಕಾರಣದಿಂದಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರೂ ಕೂಡ ಈ ವೈದ್ಯರು ತನ್ನ ಕ್ಲಿನಿಕ್ ನಲ್ಲಿ ಮತ್ತು ಮನೆಯಲ್ಲಿ ಸೇವೆ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಕ್ಕೆ ಮೊದಲ ಬಲಿಯಾದ ಘಟನೆ ನಡೆಯುತ್ತಿರುವಂತೆಯೇ ಜಿಲ್ಲೆಯಲ್ಲಿ ಇನ್ನೊಂದು ಪಾಸಿಟಿವ್ ಪ್ರಕರಣ ಕೂಡ ದೃಢಪಟ್ಟಿದ್ದು ಇವರು ಉಪ್ಪಿನಂಗಡಿ ಮೂಲದ ಮಹಿಳೆಯಾಗಿದ್ದಾರೆ. ಇವರ ಪತಿಗೆ ಈಗಾಗಲೇ ಕೋರೋನಾ ಪಾಸಿಟಿವ್ ಧೃಡ ಗೊಂಡಿತ್ತು.
ಕಳೆದ ಒಂದೂವರೆ ವಾರದಿಂದೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹೊಸ ಕೋರೋನಾ ಸೋಂಕು ಪತ್ತೆಯಾಗಿರಲಿಲ್ಲ. ಏಪ್ರಿಲ್ 17ರಂದು ಉಪ್ಪಿನಂಗಡಿ ಮೂಲದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವ್ಯಕ್ತಿಯ ಪತ್ನಿಯಲ್ಲಿ ಎಪ್ರಿಲ್ 19ರಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












