ಸನ್ಮಾರ್ಗ ವಾರ್ತೆ
ಡಮಸ್ಕಸ್, ಎ. 21: ವಿಶ್ವ ಕೊರೊನಾ ವೈರಸ್ ಹೆದರಿಕೆಯಲ್ಲಿರುವಾಗ ಇತ್ತ ಸಿರಿಯದ ಮೇಲೆ ಇಸ್ರೇಲ್ ಮಿಸೈಲ್ ದಾಳಿ ಮಾಡಿದೆ. ಸೋಮವಾರ ರಾತ್ರೆ ಪಲ್ಮಿರ ಬಳಿಯ ಮರುಭೂಮಿಯಲ್ಲಿ ಮಿಸೈಲ್ ಬಿದ್ದಿದೆ. ಇಸ್ರೇಲಿನ ಯುದ್ಧವಿಮಾನಗಳಿಂದ ಬಂದ ಹಲವು ಮಿಸೈಲ್ಗಳನ್ನು ಅದು ಗುರಿಯೆಡೆಗೆ ಬರುವ ಮೊದಲೇ ಸಿರಿಯ ಸೈನ್ಯ ಹೊಡೆದುರುಳಿಸಿದೆ ಎಂದು ಸಿರಿಯ ಟಿವಿ ವರದಿ ಮಾಡಿದೆ. ದಾಳಿಯ ಕುರಿತು ಹೆಚ್ಚಿನ ವಿವರಗಳು ಬಹಿರಂಗಪಡಿಸಲಾಗಿಲ್ಲ. ಪಲ್ಮಿರದಲ್ಲಿ ಇರಾನ್ ಬೆಂಬಲಿತ ಯೋಧರನ್ನು ಗುರಿಯಾಗಿರಿಸಿ ಇಸ್ರೇಲ್ ದಾಳಿ ನಡೆಸಿತು ಎಂದು ಬ್ರಿಟನ್ನ ಸಿರಿಯನ್ ಒಬ್ಸರ್ಟೇವೇಟರಿ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ. ಇಸ್ರೇಲಿನ ಯುದ್ಧ ವಿಮಾನಗಳು ನೆರೆಯ ಲೆಬನಾನ್ ದೇಶಗಳ ಮೂಲಕ ಹಾರಾಟ ನಡೆಸಿದೆ ಎಂದು ಇವರು ತಿಳಿಸಿದ್ದಾರೆ.
ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್ರನ್ನು ಇರಾನ್ ಬೆಂಬಲಿಸುತ್ತಿದೆ. ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ ಸಾರಿಫ್ ಡಮಸ್ಕಸ್ಗೆ ಬಂದು ಅಸದ್ರನ್ನು ಭೇಟಿಯಾದ ಗಂಟೆಗಳಲ್ಲಿ ಮಿಸೈಲ್ ದಾಳಿಯಾಗಿದೆ. ಕಳೆದ ತಿಂಗಳು ಇಸ್ರೇಲ್ ಯುದ್ಧ ವಿಮಾನಗಳು ಹಿಂಸ್ನ ಶೇರಾತ್ ವ್ಯೋಮ ಕೇಂದ್ರಕ್ಕೆ ಮಿಸೈಲ್ ದಾಳಿ ಮಾಡಿದ್ದವು. ಕಳೆದವಾರ ಇಸ್ರೇಲ್ ಹಿಝ್ಬುಲ್ಲ ಸದಸ್ಯರು ಸಂಚರಿಸಿದ ವಾಹನದ ಮೇಲೆ ಮಿಸೈಲ್ ದಾಳಿ ನಡೆಸಿತ್ತು. ಯಾರೂ ಗಾಯಗೊಂಡಿಲ್ಲ. ಕೊರೊನಾ ಪ್ರತಿರೋಧಕ್ಕಾಗಿ ಜಾಗತಿಕವಾಗಿ ಯುದ್ಧವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಆಗ್ರಹಿಸಿತ್ತು. ಹೋರಾಟಗಳೂ ಗಲಭೆಗಳು ಕೊರೊನಾ ಪ್ರತಿರೋಧಕ್ಕೆ ಅಡ್ಡಿಯಾಗಬಹುದು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕಷ್ಟವುಂಟು ಮಾಡಬಹುದು ಎಂದು ವಿಶ್ವಸಂಸ್ಥೆ ಹೇಳಿತ್ತು. ಇದೇವೇಳೆ, ಲೆಬನಾನ್ -ಇಸ್ರೇಲ್ ಗಡಿಯಲ್ಲಿ ಲೆಬನಾನ್ ಪ್ರಚೋದನಕಾರಿ ಚಟುವಟಿಕೆ ನಡೆಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ದೂರು ನೀಡಲಾಗುವುದೆಂದೂ ಇಸ್ರೇಲ್ ಹೇಳಿಕೊಂಡಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












