ಕೊರೋನಾ: ಬಂಟ್ವಾಳದ ಮಹಿಳೆಯ ಶವಸಂಸ್ಕಾರಕ್ಕೆ ತೀವ್ರ ವಿರೋಧ: ಬಿಜೆಪಿ ಶಾಸಕ ಭರತ್ ಶೆಟ್ಟಿಯಿಂದ ಅಡ್ಡಿ; ರುದ್ರಭೂಮಿಗಳಲ್ಲಿ ಸೇರಿದ ಜನಸಮೂಹ- ವೀಡಿಯೊ

0
4368

ಸನ್ಮಾರ್ಗ ವಾರ್ತೆ

ಮಂಗಳೂರು, ಎಪ್ರಿಲ್ 24- ಕೊರೋನಾದ ಕಾರಣದಿಂದ ಮೃತಪಟ್ಟ ಮಹಿಳೆಯ ಶವಸಂಸ್ಕಾರಕ್ಕೆ ಇಲ್ಲಿನ ವಿವಿಧ ರುದ್ರಭೂಮಿಗಳಲ್ಲಿ ವಿರೋಧ ವ್ಯಕ್ತವಾಗಿ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ಪೇಚಿಗೆ ಸಿಲುಕಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬಂಟ್ವಾಳದ 75 ವರ್ಷದ ಮಹಿಳೆ ನಿನ್ನೆ ಕೊರೋನಾದಿಂದಾಗಿ ಮೃತಪಟ್ಟಿದ್ದರು. ಇದು ಜಿಲ್ಲೆಯಲ್ಲಿ ಕೊರೋನಾಕ್ಕೆ ಎರಡನೇ ಬಲಿಯಾಗಿದ್ದು ಈ ಮಹಿಳೆಯು ಏಪ್ರಿಲ್ 19ರಂದು ಸಾವಿಗೀಡಾದ ಬಂಟ್ವಾಳದ ಮಹಿಳೆಯ ಅತ್ತೆಯಾಗಿದ್ದಾರೆ.

ಜಿಲ್ಲೆಯ ವಿವಿಧ ರುದ್ರಭೂಮಿ ಗಳಲ್ಲಿ ಜನರು ಶವಸಂಸ್ಕಾರಕ್ಕೆ ಅಡ್ಡಿಪಡಿಸಿದರಲ್ಲದೆ, ತಮ್ಮ ಪರಿಸರದ ರುದ್ರಭೂಮಿಯಲ್ಲಿ ಕೊರೋನಾ ಪೀಡಿತ ಮಹಿಳೆಯ ಶವ ಸಂಸ್ಕಾರ ಮಾಡಬಾರದು ಎಂದು ನಿನ್ನೆ ರಾತ್ರಿ ಪಟ್ಟು ಹಿಡಿದರು. ಆರಂಭದಲ್ಲಿ ಜಿಲ್ಲಾಡಳಿತವು ಮೃತದೇಹವನ್ನು ಬೋಳಾರದ ಹಿಂದೂ ರುದ್ರಭೂಮಿಗೆ ಕಳುಹಿಸಿತು. ಅಧಿಕಾರಿಗಳು ಬರುವ ಮೊದಲು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.

ಆ ಬಳಿಕ ಪಚ್ಚನಾಡಿಯಲ್ಲಿರುವ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನಡೆಸುವುದಕ್ಕೆ ಜಿಲ್ಲಾಡಳಿತ ತೀರ್ಮಾನಿಸಿತು. ಈ ವಿಷಯವನ್ನು ಅರಿತ ಸ್ಥಳೀಯ ಬಿಜೆಪಿ ಶಾಸಕ ಡಾ/ ಭರತ್ ಶೆಟ್ಟಿಯವರು, ಮಹಿಳೆಯರು ಪುರುಷರು ಮಕ್ಕಳ ಜೊತೆಗೆ ರುದ್ರಭೂಮಿಯ ಗೇಟಿನ ಮುಂದೆ ನೆರೆದು ಅಡ್ಡಿಪಡಿಸಿದರು.

ಸ್ಥಳೀಯರ ವಿರೋಧ ಇರುವುದರಿಂದ ತಾನು ಶವಸಂಸ್ಕಾರಕ್ಕೆ ಬಿಡಲ್ಲ ಎಂದು ಹೇಳಿದರು. ನನ್ನ ತನಗೆ ಮಾಹಿತಿ ನೀಡದೆ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮೃತದೇಹವನ್ನು ತನ್ನ ಕ್ಷೇತ್ರವಾದ ಪಚ್ಚನಾಡಿ ರುದ್ರ ಭೂಮಿಗೆ ತಂದಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಬೇರೆ ದಾರಿಯಿಲ್ಲದೆ ಅಧಿಕಾರಿಗಳು ಮೃತದೇಹವನ್ನು ಮರಳಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದರು.

ಈ ಕುರಿತಂತೆ ಭರತ್ ಶೆಟ್ಟಿಯವರು ಆಡಿರುವ ಮಾತಿನ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನರ ನಡುವೆ ನಿಂತು ಶಾಸಕರು ಆಡುತ್ತಿರುವ ಮಾತು ವಿಡಿಯೋದಲ್ಲಿ ದಾಖಲಾಗಿದೆ.

ಕೊನೆಗೆ ನಗರದ ಯಾವುದಾದರೂ ಒಂದು ರುದ್ರಭೂಮಿಯಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಅನ್ನುವ ವದಂತಿಗಳು ಹರಡಿದ್ದು ಅದರ ಪರಿಣಾಮವಾಗಿ ಶಕ್ತಿನಗರ, ಮೂಡು ಶೆಡ್ಡೆ, ಪದವಿನಂಗಡಿ, ಸಜಿಪ ಮತ್ತು ಕಂಚಿನಡ್ಕ ರುದ್ರಭೂಮಿ ಗಳಲ್ಲಿ ಜನರು ಸೇರಿ ಶವಸಂಸ್ಕಾರಕ್ಕೆ ವಿರೋಧ ಸೂಚಿಸಿದರು. ಕೊನೆಗೆ ಸ್ಥಳೀಯರ ವಿರೋಧದ ನಡುವೆಯೂ ಪೊಲೀಸ್ ಬಂದೋ ಬಸ್ತಿನಲ್ಲಿ ಬಿ ಸಿ ರೋಡ್ ರೈಲು ನಿಲ್ದಾಣದ ಸಮೀಪದ ಕೈಕುಂಜೆ ರುದ್ರ ಭೂಮಿಯಲ್ಲಿ ತಡರಾತ್ರಿ ಶವಸಂಸ್ಕಾರ ನಡೆಯಿತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.