ಇಸ್ಲಾಮೀ ಫೋಬಿಯಾ ಟ್ವೀಟ್ ಮಾಡಿದವರ ಬಗ್ಗೆ ವರದಿ: ಗಲ್ಫ್ ನ್ಯೂಸ್ ವರದಿಗಾರನಿಗೆ ಬೆದರಿಕೆ

0
1158

ಸನ್ಮಾರ್ಗ ವಾರ್ತೆ

ದುಬಾಯಿ, ಎಪ್ರಿಲ್ 24- ದುಬೈಯ ಗಲ್ಫ್ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪತ್ರಕರ್ತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನೀನು ಭಾರತಕ್ಕೆ ಬಂದರೆ ನಿನ್ನನ್ನು ಬಂಧಿಸಲಾಗುವುದು ಮತ್ತು ನಿನ್ನ ಪಾಸ್ ಪೋರ್ಟನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರಿಗೆ ಬೆದರಿಕೆ ಹಾಕಲಾಗಿದೆ.

ಯುಎಇ ಮತ್ತು ಅರಬ್ ರಾಷ್ಟ್ರಗಳಲ್ಲಿ ಇಸ್ಲಾಮಿ ಫೋಬಿಕ್ ಸಂದೇಶಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಡುತ್ತಿರುವವರ ಬಗ್ಗೆ ವರದಿ ಮಾಡಿರುವುದು ಈ ಬೆದರಿಕೆಗೆ ಕಾರಣವಾಗಿದೆ. ಇವರ ವರದಿಯಿಂದಾಗಿ ಪೊಲೀಸರು ಹಲವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಮತ್ತು ಕೆಲವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯ ಮತ್ತು ವರದಿಗಾರರಾಗಿರುವ ಮಜ್ಹರ್ ಫಾರೂಕಿ ಅವರು ಈ ಕುರಿತಂತೆ ಹೇಳಿಕೊಂಡಿದ್ದು, ನನ್ನ ವಾಟ್ಸಪ್, ಫೇಸ್ಬುಕ್ ಮೆಸೆಂಜರ್, ಟ್ವಿಟರ್ ಮತ್ತು ಇಮೇಲ್ ಗಳಿಗೆ ನಿಂದನೀಯ, ಬೆದರಿಕೆಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಹೀಗೆ ಬೆದರಿಕೆ ಹಾಕಲಾದ ಕೆಲವು ಖಾತೆಗಳು ನಿಷ್ಕ್ರಿಯವಾಗಿವೆ ಮತ್ತು ಕೆಲವು ಟ್ವೀಟ್ ಗಳನ್ನು ಅಳಿಸಲಾಗಿದೆ. ಕೆಲವು ಬೆದರಿಕೆದಾರರಂತೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟ್ವೀಟರ್ ನಲ್ಲಿ ಫಾಲೋ ಮಾಡುವವರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಈತನ ಕುಟುಂಬ ಎಲ್ಲಿ ವಾಸಿಸುತ್ತಿದೆ, ಅವರನ್ನು ಅಪಹರಿಸಬೇಕು. ಅವರ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಬೇಕು ಎಂದು ಒಂದು ಸಂದೇಶ ಹೇಳಿದರೆ, ನೀನು ನಮ್ಮ ಪಟ್ಟಿಯಲ್ಲಿದ್ದೀ ಮತ್ತು ನಿನ್ನ ಮಕ್ಕಳು ಕೂಡ ನಮ್ಮ ಪಟ್ಟಿಯಲ್ಲಿದ್ದಾರೆ ಎಂದು ಇನ್ನೊಂದು ಸಂದೇಶ ಹೇಳುತ್ತದೆ. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ತನಗೆ ಐದು ಸಾವಿರಕ್ಕಿಂತಲೂ ಅಧಿಕ ಬೆದರಿಕೆ ನಿಂದನೆಯ ಸಂದೇಶಗಳು ಬಂದಿವೆ. ಇವುಗಳಲ್ಲಿ ಕೆಲವು ಖಾತೆಗಳು ನಿಷ್ಕ್ರಿಯವಾಗಿವೆ. ದುಬೈ ಸರಕಾರದ ಸಂಭಾವ್ಯ ಕ್ರಮಗಳಿಗೆ ಬೆದರಿ ಹೀಗೆ ಮಾಡಿರಬಹುದು ಎಂದವರು ಹೇಳಿದ್ದಾರೆ.

ಫಾರೂಕಿ ಅವರು ಈ ಮೊದಲು ಹಿಂದುಸ್ತಾನ್ ಟೈಮ್ಸ್ ಗೆ ಕೆಲಸ ಮಾಡಿದ್ದರು. ಇವರ ತನಿಖಾ ಬರಹಕ್ಕೆ ಅನೇಕಾರು ಬಹುಮಾನಗಳು ಲಭಿಸಿವೆ. ದುಬೈಯಲ್ಲಿರುವ ಭಾರತೀಯ ಉದ್ಯಮಿಗಳು ಮಾಡಿರುವ ಮೋಸದ ವ್ಯವಹಾರಗಳ ಬಗ್ಗೆ ಇವರ ತನಿಖಾ ಬರಹ ಸಾಕಷ್ಟು ಬೆಳಕನ್ನು ಚೆಲ್ಲಿತ್ತು. ಇದು ಬಿಜೆಪಿಯ ಐಟಿ ಸೆಲ್ ನ ಕೆಂಗಣ್ಣಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಅದೇ ವೇಳೆ ನಕಲಿ ಉದ್ಯೋಗದ ಆಮಿಷ ಒಡ್ಡಿ ಜನರಿಂದ ಹಣ ದೋಚುವ ನಕಲಿ ಏಜೆನ್ಸಿಗಳ ವಿರುದ್ಧವೂ ಇವರು ತನಿಖಾ ಬರಹ ಬರೆದು
ಸುದ್ದಿ ಮಾಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.